ಕನಕಪುರ, ಮೇ 16- ಕಾಡಿನಿಂದ ಆಹಾರ ಅರಸಿ ಗ್ರಾಮದೊಳಗೆ ಬಂದಿದ್ದ ಜಿಂಕೆಯೊಂದರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ ಹೊರಳಗಲ್ಲು ಗ್ರಾಮದಲ್ಲಿ ನಡೆದಿದೆ.
ಸಾತನೂರು ಅರಣ್ಯ ಪ್ರದೇಶ ವಲಯದ ಅಚ್ಚಲು ಬೀಟ್ನ ಕಾಡಿನಿಂದ ಹೊರಬಂದಿದ್ದ ಜಿಂಕೆ ಹೊರಳಗಲ್ಲು ಗ್ರಾಮದಲ್ಲಿ ಓಡಾಡುವಾಗ ಬೀದಿನಾಯಿಗಳು ದಾಳಿ ಮಾಡಿವೆ. ದಾಳಿಯಿಂದ ನಿತ್ರಾಣಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ, ನಂತರ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸುತ್ತಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಆರ್.ಎಫ್.ಒ.ಕುಮಾರ್, ಎಂ.ರಾಜು, ಅರಣ್ಯ ರಕ್ಷಕ ಪುಟ್ಟಸ್ವಾಮಿ ಪರಿಶೀಲಿಸಿ ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಜಿಂಕೆ ಕೆಲ ಸಮಯದ ನಂತರ ಅಸುನೀಗಿದೆ.
ಪಶು ವೈದ್ಯಾಧಿಕಾರಿ ಅರುಣ್ ಅಚ್ಚಲು ಅರಣ್ಯ ಪ್ರದೇಶದ ದ್ಯವಾಪ್ಪ ಕಟ್ಟೆಯ ಬಳಿ ಮರಣೋತ್ತರ ಪರೀಕ್ಷೆ ನಡೆಸಿ ಅಗ್ನಿ ಸಂಸ್ಕಾರ ನೆರವೇರಿಸಲಾಯಿತು.