ಮತ ಎಣಿಕೆಗೆ ದಿನಗಣನೆ ಆರಂಭ-ಹೆಚ್ಚಾದ ಅಭ್ಯರ್ಥಿಗಳ ಎದೆ ಬಡಿತ

ಬೆಂಗಳೂರು, ಮೇ 16-ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಚುನಾವಣಾ ಅಧಿಕಾರಿಗಳು ಮತ ಎಣಿಕೆಗೆ ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಮತ ಎಣಿಕೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ.

ಆಯಾಯ ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ.

ಅಂದು ಬೆಳಿಗ್ಗೆ 8ರಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾದರೂ ಫಲಿತಾಂಶ ಪ್ರಕಟಗೊಳ್ಳಲು ಸಂಜೆಯಾಗುವ ಸಾಧ್ಯತೆಯಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ ಮತ್ತು ಮತಯಂತ್ರದ ಮತಗಳನ್ನು ತಾಳೆ ಮಾಡಬೇಕಿರುವುದರಿಂದ ಫಲಿತಾಂಶ ವಿಳಂಬವಾಗಲಿದೆ. ಪ್ರತಿ ಕ್ಷೇತ್ರಕ್ಕೂ ಸುಮಾರು 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಸುಮಾರು 16 ಸುತ್ತು ಎಣಿಕೆ ಕಾರ್ಯ ನಡೆಸಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಲ್ಲದೆ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಒಟ್ಟಾರೆ ಶೇ.68.62ರಷ್ಟು ಮತದಾನವಾಗಿರುವುದರಿಂದ ಎಣಿಕೆ ಪ್ರಕ್ರಿಯೆಯು ವಿಳಂಬವಾಗುವ ಸಾಧ್ಯತೆಗಳಿವೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರೆ, ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿತ್ತು. ಬಹುತೇಕ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಮುಖಂಡರುಗಳ ನಡುವೆ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಮಾಡತೊಡಗಿದ್ದಾರೆ.

ಮತ ಎಣಿಕೆಗೆ ದಿನಗಣನೆ ಆರಂಭವಾಗಿರುವ ಬೆನ್ನಲೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ. ಹಾಗೆಯೇ ಅಭ್ಯರ್ಥಿಗಳ ಬೆಂಬಲಿಗರು ಸೇರಿದಂತೆ ರಾಜಕೀಯವಾಗಿ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮೇ 23ರಂದು ಹೊರಬೀಳುವ ಫಲಿತಾಂಶ ಎಲ್ಲದಕ್ಕೂ ತೆರೆ ಎಳೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ