ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ-ಮಾಜಿ ಸಿಎಂ ಯಡಿಯೂರಪ್ಪ

ಹುಬ್ಬಳ್ಳಿ, ಮೇ 16- ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣ ಬದಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಂದಾಣಿಕೆಯೇ ಆಗುತ್ತಿಲ್ಲ. 23ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಾಕಷ್ಟು ಬದಲಾವಣೆಯಾಗಲಿದೆ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿರುವ ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದೇವೆ. 37 ಸ್ಥಾನ ಗೆದ್ದವರು ಮುಖ್ಯಮಂತ್ರಿಯಾಗಿದ್ದಾರೆ. 2ನೇ ಸ್ಥಾನದಲ್ಲಿದ್ದವರು ಉಪಮುಖ್ಯಮಂತ್ರಿಯಾಗಿದ್ದಾರೆ.ಇದು ಪ್ರಜಾಪ್ರಭುತ್ವದ ವ್ಯಂಗ್ಯ ಎಂದು ಕುಹುಕವಾಡಿದರು.

ಇಬ್ಬರು ಪಕ್ಷೇತರ ಶಾಸಕರು ನಮಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ಕುಂದಗೋಳ ಮತ್ತು ಚಿಂಚೋಳಿಯನ್ನು ಗೆದ್ದರೆ ನಮಗೆ 108 ಶಾಸಕರ ಬೆಂಬಲ ಸಿಕ್ಕಂತಾಗುತ್ತದೆ. ಕೆಲವು ಅತೃಪ್ತ ಶಾಸಕರು ಬಿಜೆಪಿಗೆ ಬರಲು ಮುಂದೆ ಬಂದಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದಂತೆ ನಾವೇ ಸೂಚಿಸಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‍ಗೆ ನೈತಿಕತೆ ಇಲ್ಲ:
ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಿದ ಕಾಂಗ್ರೆಸ್‍ಗೆ ವೀರಶೈವ ಸಮುದಾಯದ ಮತ ಕೇಳಲು ನೈತಿಕತೆ ಇಲ್ಲ. ಅವರನ್ನು ಯಾವ ಕಾರಣಕ್ಕಾಗಿ ಅಧಿಕಾರದಿಂದ ಕೆಳಗಿಳಿಸಿತು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‍ನಿಂದ ವೀರಶೈವರಿಗೆ ಯಾವಾಗಲು ಅವಮಾನ ಆಗುತ್ತಲೇ ಇದೆ. ಪ್ರತಿ ಚುನಾವಣೆಯಲ್ಲೂ ಮತದಾರರು ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ.ಈ ಎರಡು ಚುನಾವಣೆಯಲ್ಲೂ ವೀರಶೈವರು ತಿರುಗಿಬೀಳುತ್ತಾರೆ ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನನ್ನು ಪ್ರತಿನಿತ್ಯ ಟೀಕಿಸಿದರೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನ ಹೆಸರು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪ್ರಚಾರ ಸಿಗುವುದಾದರೆ ಇನ್ನಷ್ಟು ನನ್ನನ್ನು ಟೀಕಿಸಲಿ ಎಂದು ತಿರುಗೇಟು ನೀಡಿದರು.

ನಾನು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಂಡಿಲ್ಲ. ಶಾಸಕರನ್ನು ಮುಂದೆ ಬಿಟ್ಟು ಆಟ ಆಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತು.

ಸಿದ್ದರಾಮಯ್ಯ ಹೇಳಿದ್ದನ್ನು ಕೇಳಲು ಮತದಾರರು ಮೂರ್ಖರಲ್ಲ. ವಿಧಾನಸಭೆ ಚುನಾವಣೆಯಲ್ಲಿ ಒಂದು ಕಡೆ ತಾನು ಸೋತು, ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಈ ಮಹಾನುಭಾವನಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ