ಬೆಂಗಳೂರು, ಮೇ 16- ಉಪಮೇಯರ್ ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಕಾವೇರಿಪುರ ವಾರ್ಡ್ ಮತ್ತು ಏಳುಮಲೈ ನಿಧನದಿಂದ ತೆರವಾಗಿದ್ದ ಸಗಾಯಿಪುರಂ ವಾರ್ಡ್ಗೆ ಇಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಕಾವೇರಿಪುರ ವಾರ್ಡ್ಗೆ ಬಿಜೆಪಿ ಅಭ್ಯರ್ಥಿ ಸಿ.ಪಲ್ಲವಿ ಅವರು ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಮತ್ತಿತರರೊಂದಿಗೆ ನಾಗರಬಾವಿಯಲ್ಲಿರುವ ಪಾಲಿಕೆ ವಲಯ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಇದೇ ವಾರ್ಡ್ಗೆ ಮೈತ್ರಿ ಅಭ್ಯರ್ಥಿ ಸುಶೀಲ ಸುರೇಶ್ ಅವರು ಮಾಜಿ ಶಾಸಕ ಪ್ರಿಯಕೃಷ್ಣ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರೊಂದಿಗೆ ಆಗಮಿಸಿ ನಾಗರಬಾವಿ ಪಾಲಿಕೆ ವಾರ್ಡ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅರ್ಪಿತಾ ಮೋಹನ್ಕುಮಾರ್ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇವರ ಜತೆ ಬಿಜೆಪಿ ಬಿಬಿಎಂಪಿ ಸದಸ್ಯೆ ಶಿಲ್ಪಾ ಅವರ ಪತಿ ಶ್ರೀಧರ್ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಯಿತು.
ಸಗಾಯಿಪುರಂ ವಾರ್ಡ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪಳನಿಯಮ್ಮ, ಬಿಜೆಪಿ ಅಭ್ಯರ್ಥಿಯಾಗಿ ಜೈರೀಮ್, ಪಕ್ಷೇತರ ಅಭ್ಯರ್ಥಿಯಾಗಿ ಮಾರಿಮುತ್ತು ತಮ್ಮ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಎರಡೂ ವಾರ್ಡ್ಗಳಿಗೆ ಮೇ 29ರಂದು ಚುನಾವಣೆ ನಡೆದು 31ಕ್ಕೆ ಫಲಿತಾಂಶ ಹೊರಬೀಳಲಿದೆ.