ನವದೆಹಲಿ: ಈಶ್ವರ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ತೃಣಮೂಲ ಕಾಂಗ್ರೆಸ್ ನಾಯಕರು ಧ್ವಂಸಗೊಳಿಸಿದ್ದು, ನಾವು ಆ ಸ್ಥಳದಲ್ಲಿ ಬೃಹತ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಟಿಎಂಸಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕೋಲ್ಕತ್ತಾದಲ್ಲಿ ಬುಧವಾರ ಸಹೋದರ ಅಮಿತ್ ಷಾ ರೋಡ್ ಶೋ ವೇಳೆ ಟಿಎಂಸಿ ನಾಯಕರು ಗೂಂಡಾಗಿರಿ ತೋರಿದ್ದಾರೆ. ಈ ವೇಳೆ ಅವರು ಸಾಮಾಜಿಕ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ವಿದ್ಯಾಸಾಗರ್ ಅವರ ಚಿಂತನೆ ಕುರಿತ ಒಲವು, ಬದ್ಧತೆಯನ್ನು ಹೊಂದಿರುವ ನಾವು, ಈ ಮೊದಲು ವಿದ್ಯಾಸಾಗರ್ ಅವರ ಪ್ರತಿಮೆ ಇದ್ದ ಸ್ಥಳದಲ್ಲಿಯೇ ಹೊಸ ಬೃಹತ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಪಶ್ಚಿಮ ಮೆಡಿನಿಪುರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಟಿಎಂಸಿ ನಾಯಕರು ಗೂಂಡಾ ವರ್ತನೆ ತೋರಿದ್ದರು. ನನ್ನ ಭಾಷಣವನ್ನು ಬಲವಂತವಾಗಿ ಮೊಟಕುಗೊಳೊಸಿ, ವೇದಿಕೆಯಿಂದ ತೆರಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಿನ್ನೆ ಅಮಿತ್ ಶಾ ರೋಡ್ ಶೋ ವೇಳೆ ಹಿಂಸಾಚಾರ ನಡೆದಿದೆ. ಈ ಗಲಭೆಗೆ ಬಿಜೆಪಿಯೇ ಕಾರಣ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಟಿಎಂಸಿ ಕಾರ್ಯಕರ್ತರು ಪ್ರಚೋದನೆಯಿಂದಲೇ ಹಿಂಸಾಚಾರ ನಡೆದಿದೆ. ನನ್ನ ಮೇಲೆಯೂ ದಾಳಿಗೆ ಮುಂದಾಗಿದ್ದರು ಎಂದು ಅಮಿತ್ ಶಾ ಪ್ರತ್ಯಾರೋಪ ಮಾಡಿದ್ದರು.
ಅಮಿತ್ ಶಾ ರೋಡ್ ಶೋ ವೇಳೆ ನಗರದ ಶಂಕರ್ ಘೋಷ್ ರಸ್ತೆಯಲ್ಲಿರುವ ವಿದ್ಯಾಸಾಗರ್ ಕಾಲೇಜಿಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು, ಕಾಲೇಜಿನಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿ ಮಾಡಿದ್ದರು. ಕಾಲೇಜಿನಲ್ಲಿದ್ದ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಹಾಳುಗೆಡವಿದ್ದರು.
ಅನುಮತಿ ಇಲ್ಲದಿದ್ದರೂ ಅಮಿತ್ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ, ವಿದ್ಯಾಸಾಗರ್ ಕಾಲೇಜಿನಲ್ಲಿ ಟಿಎಂಸಿಪಿ ಕಾರ್ಯಕರ್ತರು ಕಪ್ಪು ಧ್ವಜ ಹಿಡಿದು ‘ಅಮಿತ್ ಶಾ ಗೋಬ್ಯಾಕ್’ ಎಂದು ಪ್ರತಿಭಟನೆ ಮಾಡಿದ್ಧಾರೆ. ಇದರಿಂದ ಆಕ್ರೋಶಗೊಂಡ ಎಬಿವಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಕಾಲೇಜಿನ ಆವರಣಕ್ಕೆ ನುಗ್ಗಿ ಟಿಎಂಸಿಪಿ ಕಾರ್ಯಕರ್ತರೊಂದಿಗೆ ಗಲಭೆ ಉಂಟಾಗಿತ್ತು.
ಹಿಂಸಾಚಾರ ಉಂಟಾದ ಹಿನ್ನೆಲೆ ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ.
ಸಂವಿಧಾನದ 324ನೇ ವಿಧಿ ಅನುಸಾರ ಈ ಕ್ರಮಕ್ಕೆ ಆಯೋಗ ಮುಂದಾಗಿದೆ. ಭಾರತದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಂವಿಧಾನದ ಈ ವಿಶೇಷಾಧಿಕಾರ ಉಪಯೋಗಿಸಿ ಆಯೋಗವು ಬಹಿರಂಗ ಪ್ರಚಾರಕ್ಕೆ ನಿಷೇಧವಿಧಿಸಿದೆ.