ನವದೆಹಲಿ: ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆ ಧ್ವಂಸಗೊಂಡ ಸ್ಥಳದಲ್ಲೇ ನಾವು ವಿದ್ಯಾಸಾಗರರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಉತ್ತರಪ್ರದೇಶದ ಮವುನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ರೋಡ್ ಶೋ ನಂತರ ನಡೆದ ಹಿಂಸಾಚಾರದ ವೇಳೆ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆ ಧ್ವಂಸವಾಗಿತ್ತು. ನಾವು ಅದೇ ಸ್ಥಳದಲ್ಲಿ ವಿದ್ಯಾಸಾಗರರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ನಾನು ಪಶ್ಚಿಮ ಮಿಡ್ನಾಪುರದಲ್ಲಿ ಸಭೆಯೊಂದರಲ್ಲಿ ಮಾತನಾಡುವಾಗ ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಸಭೆಯಲ್ಲಿ ಗೂಂಡಾಗಿರಿ ನಡೆಸಿದ್ದರು. ಆ ನಂತರ ಠಾಕೂರ್ನಗರದಲ್ಲಿ ಇದೇ ಪರಿಸ್ಥಿತಿ ಮುಂದುವರಿದಿತ್ತು. ಇದರಿಂದಾಗಿ ನಾನು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ದೆ. ಈಗ ಮತ್ತೊಮ್ಮೆ ಅಮಿತ್ ಷಾ ಅವರ ರೋಡ್ ಶೋ ಮೇಲೆ ದಾಳಿ ನಡೆದಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಮಮತಾ ಬ್ಯಾನರ್ಜಿ ರಾಜಕೀಯ ಲಾಭಕ್ಕಾಗಿ ಉತ್ತರ ಪ್ರದೇಶ, ಬಿಹಾರ ಮತ್ತು ಪೂರ್ವಾಂಚಲದ ಜನರನ್ನು ಹೊರಗಿನಿಂದ ಬಂದವರು ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಮಮತಾ ಅವರ ವಿರುದ್ಧ ವಾಗ್ದಾಳಿ ನಡೆಸಬೇಕು. ಆದರೆ, ಹಾಗೆ ಆಗುತ್ತಿಲ್ಲ. ಎಸ್ಪಿ ಮತ್ತು ಬಿಎಸ್ಪಿ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಗೆ ಟಿಕೆಟ್ ನೀಡಿದೆ. ಎಸ್ಪಿ ಪಕ್ಷ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ ಇತಿಹಾಸ ಹೊಂದಿದೆ. ಆದರೆ, ಮಾಯಾವತಿ ಇಂತಹ ಅಭ್ಯರ್ಥಿಯ ಪರ ಹೇಗೆ ಮತ ಯಾಚಿಸುತ್ತಾರೆ ಎಂದು ಪ್ರಶ್ನಿಸಿದರು.
PM Narendra Modi promises Vidyasagar statue at ‘same spot’