ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು ಆರು ಶತಕಗಳು ದಾಖಲಾಗಿವೆ. ಯೆಸ್ ಆದ್ರೆ, ಆ ಆರು ಶತಕಗಳು ಸಿಡಿಸಿದ್ದು ಮಾತ್ರ ಓಪನಿಂಗ್ ಬ್ಯಾಟ್ಸ್ಮನ್ಗಳೇ ಅನ್ನೋದು ವಿಶೇಷ. ಅಲ್ದೇ ಮೂರು ಶತಕಗಳು ಒಂದೇ ಮೈದಾನದಲ್ಲಿ ಸಿಡಿದಿರೋದು ಮತ್ತೊಂದು ವಿಶೇಷ.. ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡೋ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಹಾಗಾದ್ರೆ ಬನ್ನಿ ಕಲರ್ಫುಲ್ ಟೂರ್ನಿಯಲ್ಲಿ ಶತಕ ಬಾರಿಸಿದ ಬ್ಯಾಟ್ಸ್ಮನ್ಗಳು ಯಾರು ಅನ್ನೋದನ್ನ ನೋಡೋಣ.
ತಲಾ ಶತಕ ಸಿಡಿಸಿದ ಜಾನಿ ಬೇರ್ ಸ್ಟೋ, ಡೇವಿಡ್ ವಾರ್ನರ್
ಹೈದ್ರಾಬಾದ್ ತಂಡದ ಪರವಾಗಿ ಬ್ಯಾಟ್ ಬೀಸುತ್ತಿದ್ದ ಬೇರ್ ಸ್ಟೋ, ಡೇವಿಡ್ ವಾರ್ನರ್ ತಂಡದ ಜೋಡೆತ್ತುಗಳಾಗಿದ್ರು. ಈ ಜೋಡೆತ್ತುಗಳು ಅಬ್ಬರಿಸಿದ್ರೆ ತಂಡ ಸುಲಭವಾಗಿ ಗೆಲುವಿನ ಕೇಕೆ ಹಾಕುತ್ತಿತ್ತು.
ಆರ್ಸಿಬಿ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಮಾಡಿದ ಬೇರ್ ಸ್ಟೋ ಕೇವಲ 56 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸರ್ ನೊಂದಿಗೆ ಮೊದಲ ಐಪಿಎಲ್ ಶತಕವನ್ನು ಗಳಿಸಿದ ಸಾಧನೆ ಮಾಡಿದ್ರು. ಈ ವರ್ಷದ ಫಾಸ್ಟೆಸ್ಟ್ ಸೆಚೂರಿ ಬಾರಿಸಿದ ಆಟಗಾರ ಜಾನಿ ಬೇರ್ ಸ್ಟೋ ಆಗಿದ್ದಾರೆ.
ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ಡೇವಿಡ್ ವಾರ್ನರ್ ಕೂಡ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಾಯದ ಮೂಲಕ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ನಲ್ಲಿ 4 ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇನ್ನೂ ಟೂರ್ನಿಯಲ್ಲಿ 12 ಪಂದ್ಯಗಳಿಂದ 692 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಸರದಾರನಾಗಿದ್ದಾರೆ.
ಸ್ಯಾಮ್ಸನ್, ಅಜಿಂಕ್ಯಾ ರಹಾನೆ ಕ್ಲಾಸಿಕ್ ಸೆಂಚೂರಿ
ರಾಜಸ್ಥಾನದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಈ ಜೋಡಿ ತಂಡದ ಬ್ಯಾಟಿಂಗ್ ಶಕ್ತಿ ಎನ್ನಿಸಿದ್ದರು. ಸನ್ ರೈಸರ್ಸ್ ವಿರುದ್ಧ ಸಂಜು ಕೇವಲ 54 ಎಸೆತಗಳಲ್ಲಿ 102 ರನ್ ಸಿಡಿಸಿದ್ರು. ಈ ಮೂಲಕ ಐಪಿಎಲ್ಲ್ಲಿ 2ನೇ ಶತಕ ಸಿಡಿಸಿದ ಆಟಗಾರ ಎಂಬ ಹಿರಿಮೆಗೆ ಸ್ಯಾಮ್ಸನ್ ಪಾತ್ರರಾದ್ರು.
ರಾಜಸ್ಥಾನದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಮತ್ತೊಬ್ಬ ಆಟಗಾರ ಅಜಿಕ್ಯಾ ರಹಾನೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಹಾನೆ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. 58 ಎಸೆತಗಳಲ್ಲಿ 105ರನ್ ಸಿಡಿಸೋ ಮೂಲಕ ಐಪಿಎಲ್ಲ್ಲಿ 2ನೇ ಶತಕ ಸಿಡಿಸಿದ ಗೌರವಕ್ಕೆ ಪಾತ್ರರಾದರು. ದುರಾದೃಷ್ಟ ರಹಾನೆ ಶತಕಕ್ಕೂ ವಿಜಯಮಾಲೆ ಹೊಲಿಯಲಿಲ್ಲ..
ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸ್ಟೈಲಿಶ್ ಶತಕ
ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ, ಈ ಬಾರಿ ರನ್ ಮಳೆ ಹರಿಸೋದಕ್ಕಿಂತ ಹೆಚ್ಚು ಪಂದ್ಯ ಕೈಚೆಲ್ಲೋದ್ರಿಂದ ಸದ್ದು ಮಾಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 57 ಎಸೆತಗಳಲ್ಲಿ ಶತಕ ಸಿಡಿಸಿ ತಮ್ಮ ಐಪಿಎಲ್ ಶತಕಗಳ ಸಂಖ್ಯೆ 5ಕ್ಕೇರಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಹೆಚ್ಚು ಸೆಂಚೂರಿ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಪಾತ್ರರಾಗಿದ್ದಾರೆ.
ಇಲೆವೆನ್ ಪಂಜಾಬ್ ತಂಡದ ಪರ ಅಬ್ಬರಿಸಿದ ಪ್ಲೇಯರ್ ಕೆ.ಎಲ್ ರಾಹುಲ್. ಈ ಆಟಗಾರ ಆಟಕ್ಕೆ ಬೋಲ್ಡ್ ಆಗದವರೇ ಇಲ್ಲ. ಅಂಗಳದಲ್ಲಿ ರಾಹುಲ್ ಬಾರಿಸುವ ಸಿಕ್ಸರ್, ಬೌಂಡರಿಗಳು ತಂಡದ ರನ್ ರೇಟ್ ಹೆಚ್ಚು ಮಾಡ್ತಾ ಇದ್ದರೆ. ಇತ್ತ ಕ್ರಿಕೆಟ್ ಅಭಿಮಾನಿಗಳ ಮುದ ನೀಡುತ್ತಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ಈ ಕರುನಾಡ ಕಲಿ 63 ಎಸೆತಗಳಲ್ಲಿ ಶತಕ ಸಿಡಿಸೋ ಮೂಲಕ ಐಪಿಎಲ್ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದಾರೆ.