ನಮಗೆ ರಾಷ್ಟ್ರೀಯ ಭದ್ರತೆ ಮುಖ್ಯ ವಿಷಯವಾಗಿದೆ-ಪ್ರಧಾನಿ ಮೋದಿ

ಪಾಲಿಗಂಜ್(ಬಿಹಾರ), ಮೇ 15-ಪ್ರಬಲ ಕಾರ್ಯತಂತ್ರ ಮತ್ತು ಅತ್ಯುಗ್ರ ಕ್ರಮಗಳಿಂದ ಮಾತ್ರ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮೇ 19ರಂದು ನಡೆಯುವ ಏಳನೆ ಮತ್ತು ಕೊನೆ ಹಂತದ ಚುನಾವಣೆಗಾಗಿ ಬಿಹಾರದ ಪಾಟಲಿಪುತ್ರ ಲೋಕಸಭಾ ವ್ಯಾಪ್ತಿಯ ಪಾಲಿಗಂಜ್‍ನಲ್ಲಿ ಬೃಹತ್ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡಿದೆ ಎಂಬ ಪ್ರತಿಪಕ್ಷಗಳ ಆಕ್ಷೇಪಗಳಿಗೆ ತರಾಟೆ ತೆಗೆದುಕೊಂಡರು.

ರಾಷ್ಟ್ರೀಯ ಭದ್ರತೆ ಮುಖ್ಯ ವಿಷಯವಲ್ಲವೇ. ಇದು ಏಕೆ ಮುಖ್ಯ ವಿಚಾರವಾಗಬಾರದು ಎಂದು ವಿರೋಧ ಪಕ್ಷಗಳನ್ನು ಪ್ರಧಾನಿ ಪ್ರಶ್ನಿಸಿದರು.

ಮಹಾ ಕಲಬೆರಕೆ ಪಕ್ಷಗಳು ರಾಷ್ಟ್ರೀಯ ಭದ್ರತೆ ಮುಖ್ಯ ವಿಷಯವಾಗದೇ ಇರಬಹುದು. ಆದರೆ ನಮಗೆ ಇದು ಅತ್ಯಂತ ಪ್ರಧಾನ ವಿಷಯ. ಭಯೋತ್ಪಾದಕರ ದಾಳಿಗಳಿಂದ ಅನೇಕ ಜನಸಾಮಾನ್ಯರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವಾಗ ಇದು ಮುಖ್ಯ ವಿಷಯವಲ್ಲವೇ ಎಂದು ಅವರು ವಿಪಕ್ಷ ಮುಖಂಡರ ವಿರುದ್ಧ ಹರಿಹಾಯ್ದರು.

ಉಗ್ರರಿಗೆ ಅವರ ಭಾಷೆಯಲ್ಲೇ ಉತ್ತರಿಸುತ್ತಿದ್ದೇವೆ. ಅವರು ಮಾಡಿದ ಕೃತ್ಯದ ರೀತಿಯಲ್ಲೇ ಅವರನ್ನು ಮುಗಿಸುತ್ತಿದ್ಧೇವೆ. ಅವರ ಅಡಗುತಾಣಗಳಿಗೆ ನುಗ್ಗಿ ಬೆನ್ನಟ್ಟಿ ನಿರ್ಮೂಲನೆ ಮಾಡುತ್ತಿದ್ದೇವೆ ಎಂದು ಬಾಲಾಕೋಟ್ ವಾಯು ದಾಳಿಯನ್ನು ಪ್ರಧಾನಿ ಉಲ್ಲೇಖಿಸಿದರು.

ಇದು ಬಿಹಾರದಲ್ಲಿ ನನ್ನ ಕೊನೆಯ ಚುನಾವಣಾ ಪ್ರಚಾರ ಭಾಷಣ. ಆದರೆ ನಾನು ಮತ್ತೆ ಪ್ರಧಾನಿಯಾಗಿ ನನ್ನ ಹೊಸ ಅಭಿವೃದ್ಧಿ ಯೋಜನೆಗಳೊಂದಿಗೆ ನಿಮ್ಮ ಬಳಿ ಬರುತ್ತೇನೆ. ನಿಮ್ಮ ಪ್ರೀತಿ-ಅಭಿಮಾನದ ಮೇಲೆ ನನಗೆ ವಿಶ್ವಾಸವಿದೆ. ಗೆಲ್ಲುವ ಭರವಸೆ ಇದೆ. ನನ್ನನ್ನು ಮತ್ತು ನನ್ನ ಪಕ್ಷವನ್ನು ಆಶೀರ್ವದಿಸಿ ಎಂದು ಮೋದಿ ಮತದಾರರಲ್ಲಿ ಭಾವೋದ್ವೇಗದ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ