ಮಳೆ ಕೊರತೆ ಹಿನ್ನಲೆ ರಾಜ್ಯದಲ್ಲಿ ಮೋಡ ಬಿತ್ತನೆ-ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಮೇ 15-ಮುಂಗಾರು ಮಳೆ ಕೊರತೆ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ(ಮಳೆ ಪ್ರಮಾಣ ಹೆಚ್ಚಿಸಲು) ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಹಮ್ಮಿಕೊಂಡಿದ್ದ ಸಿಎಂ ವೀಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿದ ಅವರು, ಜೂನ್ ಅಂತ್ಯದಲ್ಲಿ ಮೋಡಬಿತ್ತನೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಇನ್ನೆರಡು ವಾರದೊಳಗೆ ಮೋಡ ಬಿತ್ತನೆ ಟೆಂಡರ್ ಅಂತಿಮಗೊಳ್ಳಲಿದೆ. ಪರಿಣಿತರ ಸಮಿತಿ ವರದಿ ಆಧರಿಸಿ 2019-20 ಹಾಗೂ 2020 ಮತ್ತು 2021ರ ಅವಧಿಗೆ ಮೋಡ ಬಿತ್ತನೆ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ. ಸುಮಾರು 88 ಕೋಟಿ ರೂ.ವೆಚ್ಚದಲ್ಲಿ ಮೊಡಬಿತ್ತನೆ ಕೈಗೊಳ್ಳಲಾಗುತ್ತದೆ.ಆಗಸ್ಟ್ನಲ್ಲಿ ಮೊಡ ಬಿತ್ತನೆ ಆರಂಭಿಸಲಾಗುತ್ತಿತ್ತು. ಸತತ ಬರ ಹಾಗೂ ಮಳೆ ಕೊರತೆಯಿಂದಾಗಿ ಮುಂಗಾರಿನೊಂದಿಗೆ ಈ ಬಾರಿ ಮೊಡ ಬಿತ್ತನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ತಲಾ ಒಂದೊಂದು ಕೇಂದ್ರ ತೆರೆಯಲಾಗುವುದು. ಎರಡು ವಿಮಾನಗಳನ್ನು ಮೋಡ ಬಿತ್ತನೆಗಾಗಿ ಬಳಸಲಿದ್ದು, ಎಲ್ಲೆಲ್ಲಿ ಮಳೆ ಕೊರತೆ ಕಂಡುಬರುತ್ತದೆ ಮತ್ತು ಮೋಡ ಬಿತ್ತನೆ ಮಾಡಲು ಅನಾನುಕೂಲಕರವಾದ ವಾತಾವರಣ ಎಲ್ಲೆಲ್ಲಿ ಕಂಡುಬರುತ್ತದೋ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲು ಉದೇಶಿಸಲಾಗಿದೆ ಎಂದರು.

ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಮೋಡ ಬಿತ್ತನೆ ಕೈಗೊಳ್ಳಲು ಉದ್ದೇಶಿಸಲಾಗಿದೆ.ಅಲ್ಲದೆ, ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗುವ ಬಗ್ಗೆಯೂ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ