ಬೆಂಗಳೂರು, ಮೇ 15- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಬಿಬಿಎಂಪಿ ಶಾಲೆಗಳ ಹೊರ ಗುತ್ತಿಗೆ ಶಿಕ್ಷಕರನ್ನು ತೆಗೆದು ಹಾಕಲಾಗುವುದು.
ಖಾಯಂ ಶಿಕ್ಷಕರಿಗೆ ಮುಂಬಡ್ತಿಯನ್ನು ತಡೆ ಹಿಡಿಯಲಾಗುವುದು ಎಂದು ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶ ಕುರಿತಂತೆ ಪಾಲಿಕೆ ವ್ಯಾಪ್ತಿಯ 32 ಪ್ರೌಢಶಾಲಾ ಮುಖ್ಯಸ್ಥರು ಹಾಗೂ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪಾಲಿಕೆ ಶಾಲೆಗಳಿಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಶಿಕ್ಷಕರನ್ನು ತೆಗೆಯಲಾಗುವುದು. ಹಾಗೂ ಕಾಯಂ ಶಿಕ್ಷಕರುಗಳಿಗೆ ಮುಂಬಡ್ತಿಯನ್ನು ತಡೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಫಲಿತಾಂಶ ಕಡಿಮೆಯಾಗಲು ಕಾರಣವೇನೆಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯಲಾಯಿತು.
ಸಭೆಯಲ್ಲಿ 32 ಪ್ರೌಢಶಾಲಾ ಮುಖ್ಯಸ್ಥರು, ಶಿಕ್ಷಣ ಸ್ಥಾಯಿ ಸಮಿತಿಯ ಸದಸ್ಯರು, ಶಿಕ್ಷಣ ಇಲಾಖೆಯ ವಿಶೇಷ ಆಯುಕ್ತರು ಸೇರಿದಂತೆ ಮತ್ತಿತರರು ಇದ್ದರು.