ಬೆಂಗಳೂರು, ಮೇ 15-ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ನಡೆಸುವ ಬರ ಪರಿಹಾರ ಪರಾಮರ್ಶನಾ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಬಾರದು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬರ ಪರಿಹಾರ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಲು ಕಡಿವಾಣ ಹಾಕಲಾಗಿತ್ತು. ಆದರೆ ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಪರಿಶೀಲನಾ ಸಭೆಗಳಿಗೆ ಆಯೋಗ ಷರತ್ತುಬದ್ಧ ಅನುಮತಿ ನೀಡಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ನಡೆಸುವ ಸಭೆಗಳಲ್ಲಿ ಅಧಿಕಾರಿಗಳು ಭಾಗವಹಿಸಬಹುದು. ಚುನಾಯಿತ ಪ್ರತಿನಿಧಿಗಳಾದ ಶಾಸಕರು, ವಿಧಾನಪರಿಷತ್ ಸದಸ್ಯರು, ಗ್ರಾಮೀಣ -ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ್ತು ಇತರ ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಬರ ಪರಿಸ್ಥಿತಿ ತೀವ್ರಗೊಂಡಿರುವುದರಿಂದ ಗ್ರಾಮೀಣ ಭಾಗದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಬರ ಕಾಮಗಾರಿಗಳಿಗೆ ಅಡ್ಡಿಯಾಗಿದೆ.
ಯಾವುದೇ ಅನುದಾನ ಬಿಡುಗಡೆ ಮಾಡುವಂತಿಲ್ಲ. ರಾಜ್ಯಸರ್ಕಾರದ ಮನವಿ ಮೇರೆಗೆ ಚುನಾವಣಾ ಆಯೋಗ ಸಭೆ ನಡೆಸಲು ಅವಕಾಶ ನೀಡಿದರೂ ಚುನಾಯಿತ ಜನಪ್ರತಿನಿಧಿಗಳನ್ನು ಸಭೆಯಿಂದ ದೂರ ಇಡಲಾಗಿದೆ.