ಭೋಪಾಲ್: ಕಾಂಗ್ರೆಸ್ ಪಕ್ಷ ದೇಶದ ಸೈನ್ಯ ಕಟ್ಟುವಾಗ ಪ್ರಧಾನಿ ಮೋದಿಗೆ ಪ್ಯಾಂಟ್ ಹಾಕುವುದು ಹೇಗೆಂದು ಸಹ ಗೊತ್ತಿರಲಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.
ರತ್ಲಂನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡುತ್ತಿದ್ದ ಅವರು, ಮೋದಿ ಅವರು ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ನಾನು ಅವರಿಗೆ ಒಂದೇ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಿಮಗೆ ಪ್ಯಾಂಟ್ ಹೇಗೆ ಧರಿಸುವುದು ಎಂಬ ಅರಿವಿಲ್ಲದ ಸಮಯದಲ್ಲಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಸೈನ್ಯ ಕಟ್ಟಿದ್ದರು ಎಂದು ಹೇಳಿದರು.
ಬಿಜೆಪಿ ಅಧಿಕಾರಾವಧಿಯಲ್ಲಿ ಅನೇಕ ಬಾರಿ ಉಗ್ರ ದಾಳಿಯಾಗಿದೆ. 2002ರಲ್ಲಿ ಸಂಸತ್ತಿನ ಮೇಲೆ ದಾಳಿಯಾದಾಗಲೂ ಮತ್ತು ಈ ವರ್ಷ ಪುಲ್ವಾಮಾ ದಾಳಿ ನಡೆದಾಗಲೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ ಎಂದು ಕಮಲ್ ನಾಥ್ ವಾಗ್ದಾಳಿ ನಡೆಸಿದರು.
ಬಿಜೆಪಿಯ ಅಚ್ಚೇ ದಿನ್ ಘೋಷಣೆಯನ್ನು ಉಲ್ಲೇಖಿಸಿ ಅಣಕವಾಡಿರುವ ಅವರು, ‘ ಅಚ್ಚೇ ದಿನಗಳಲ್ಲ, ಅಂತಿಮ ದಿನಗಳು ಬಂದಿವೆ’ ಎಂದರು. ಕಳೆದ 5 ವರ್ಷಗಳಿಂದ ಮೋದಿ ಅವರು ಸುಳ್ಳನ್ನಾಡುತ್ತಲೇ ಇದ್ದಾರೆ. ನಿಮಗಾಗಿ ಕೇವಲ 140 ಗಂಟೆಗಳಷ್ಟೇ ಬಾಕಿ ಉಳಿದಿವೆ. ಬುಡಕಟ್ಟು ಜನಾಂಗದವರನ್ನು ರಕ್ಷಿಸುತ್ತೇನೆ ಎಂದಿದ್ದ ನೀವು ಕಳೆದ ಐದು ವರ್ಷಗಳಿಂದ ಎಲ್ಲಿದ್ದೀರಿ ಎಂದು ಪ್ರಶ್ನಿಸಿದರು.
ಮಧ್ಯ ಪ್ರದೇಶದಲ್ಲಿ ಮತ್ತೊಂದು ಹಂತದ ಚುನಾವಣೆ ಬಾಕಿ ಇದ್ದು, ಮೇ 19 ರಂದು 8 ಸ್ಥಾನಗಳಿಗೆ ಮತದಾನ ನಡೆಯಲಿದೆ.
He didn’t even know how to wear his pants when Indian Army was formed: Kamal Nath attacks PM Modi