ಬೆಂಗಳೂರು, ಮೇ 13- ಶಿಕ್ಷಣ ಕ್ಷೇತ್ರದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಡಾ. ಎಮ್.ಆರ್.ದೊರೆಸ್ವಾಮಿ ಅವರ ಸೇವೆ ಅನನ್ಯವಾದದ್ದು ಎಂದು ಹಿರಿಯ ಕವಿ ಪದ್ಮಶ್ರಿ ಡಾ. ದೊಡ್ಡರಂಗೇಗೌಡ ತಿಳಿಸಿದರು.
ಸುಗಮ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾದ ಆದರ್ಶ ಸಂಗೀತ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗಿದ್ದ ವಸಂತ-ವೈಭವ ಕಾರ್ಯಕ್ರಮದಲ್ಲಿ ಪಿಇಎಸ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ. ಎಮ್.ಆರ್.ದೊರೆಸ್ವಾಮಿ ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ಸಾಂಸ್ಕøತಿಕ ವಾತಾವರಣ ಇರಬೇಕೆಂಬ ಅವರ ಕಳಕಳಿ ಇತರರಿಗೆ ಮಾದರಿಯಾಗಿದೆ. ಸದಸ್ಯರಾಗಿದ್ದಾಗಲೂ ಸದಾ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೇಗೆ ಸ್ಪಂದಿಸಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಿದ್ದರು.
ಅವರಿಗೆ ಇಂದು ಕನ್ನಡ ನಿತ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಇಡೀ ಶಿಕ್ಷಣ ಕ್ಷೇತ್ರಕ್ಕೆ ದೊರೆತ ಗೌರವ ಎಂದು ಅಭಿನಂದನಾ ನುಡಿಗಳನ್ನಾಡಿದರು.
ನಂತರ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ದೊರೆಸ್ವಾಮಿಯರಂತಹ ಹಿರಿಯ ಮಾರ್ಗದರ್ಶನ ಶಿಕ್ಷಣ ಕ್ಷೇತ್ರಕ್ಕೆ ಅನಿವಾರ್ಯವಾಗಿದೆ. ಇಂತಹ ಮಹನೀಯರು ಶಿಕ್ಷಣ ಸಚಿವರಾದರೆ ಶೈಕ್ಷಣಿಕ ಕ್ರಾಂತಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಖ್ಯಾತ ಕಲಾವಿದರಾದ ಜಯರಾಮ್, ಅಭಿಷೇಕ್, ಶಶಿಧರ್, ಕವಿಯಿತ್ರಿ ಮಾಲತಿ ಶೆಟ್ಟಿ, ಕನ್ನಡ ಕಟ್ಟಾಳು ಸಿ.ಕೆ.ರಾಮೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.