ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ-ಟಿ.ಎ.ಶರವಣ

ಬೆಂಗಳೂರು,ಮೇ 13- ಆಡಳಿತಾರೂಢ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಎರಡು ಪಕ್ಷಗಳ ಮುಖಂಡರು ಒಂದೆಡೆ ಕುಳಿತು ಚರ್ಚಿಸಿ ಪರಿಹರಿಸುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಹೇಳಿಕೆಗಳನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಯಾರೂ ಕೂಡ ವೈಯಕ್ತಿಕವಾಗಿ ಹೇಳಿಕೆಗಳನ್ನು ನೀಡಬಾರದು. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಪ್ರತಿಯೊಬ್ಬರು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕು. ಲಕ್ಷ್ಮಣ ರೇಖೆ ದಾಟದಂತೆ ಎಲ್ಲರೂ ನಿಯಂತ್ರಣ ಹಾಕಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯವರ ಯಾವ ಡೆಡ್‍ಲೈನ್ ಕೂಡ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸರ್ಕಾರ ರಚನೆಯಾದ ದಿನದಿಂದಲೂ ಅವರು ಡೆಡ್‍ಲೈನ್ ಕೊಡುತ್ತಲೇ ಬಂದಿದ್ದಾರೆ. ಇದಕ್ಕೆ ಯಾರೊಬ್ಬರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ದಸರಾ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹೀಗೆ ಪ್ರತಿ ತಿಂಗಳಿಗೊಂದು ಡೆಡ್‍ಲೈನ್ ನೀಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಇತ್ತೀಚೆಗೆ ಗಿಣಿ ಶಾಸ್ತ್ರವನ್ನು ಹೇಳುವುದಕ್ಕೆ ಪ್ರಾರಂಭಿಸಿದ್ದಾರೆ. ಅವರ ಬಳಿ ಯಾರೊಬ್ಬರೂ ಗಿಣಿ ಶಾಸ್ತ್ರ ಕೇಳಲು ಬರುತ್ತಿಲ್ಲ. ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರ ಯಾವುದೇ ಪ್ರಯತ್ನಗಳು ಈಡೇರುವುದಿಲ್ಲ. 23ರ ನಂತರವೂ ಸರ್ಕಾರ ಕಲ್ಲುಬಂಡೆಯಷ್ಟೇ ಭದ್ರವಾಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಶರವಣ ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ