
ಬೆಂಗಳೂರು: ತಮ್ಮ ವಿರುದ್ಧದ ದಳಪತಿಗಳ ಹೇಳಿಕೆಗಳಿಗೆ ತೀವ್ರ ಸಮಾಧಾನ ಹೊರ ಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮೊದಲು ಜಿ.ಟಿ.ದೇವೇಗೌಡ, ಈಗ ವಿಶ್ವನಾಥ್… ಮುಂದೆ ಯಾರು ಗೊತ್ತಿಲ್ಲ… ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು ಎಂದು ಹೇಳಿದ್ದಾರೆ.
ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಧ್ಯಕ್ಷ ಹೆಚ್ ವಿಶ್ವನಾಥ್ ಹಾಗೂ ಸಚಿವ ಜಿ ಟಿ ದೇವೇಗೌಡ ಅವರ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಟರು ಗಮನಹರಿಸಬೇಕು ಎಂದಿದ್ದಾರೆ.
ಅಲ್ಲದೇ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೆಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದ ಹೆಚ್ ವಿಶ್ವನಾಥ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಚಮಚಾ ಗಿರಿ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ 5 ವರ್ಷ ತನ್ನ ಆಡಳಿತದಲ್ಲಿ ಏನ್ ಮಾಡಿದ್ದಾರೆ? ಒಳ್ಳೆಯ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿಯಲ್ಲಿ ಆಡಳಿತ ನಡೆಸಿದ್ದಾರಾ ಎಂದು ಪ್ರಶ್ನಿಸಿದ್ದರು.
ಈ ಹಿಂದೆ ಸಚಿವ ಜಿಟಿ ದೇವೇಗೌಡ, ಮೈತ್ರಿ ವಿಚಾರದಲ್ಲಿ ಒಂದು ಕಡೆ ತಪ್ಪಾಗಿಲ್ಲ. ಎರಡು ಕಡೆ ಪಕ್ಷದಿಂದಲೂ ತಪ್ಪಾಗಿದೆ. ಆಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿತ್ತು. ಆದರೆ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಎಂಬ ತೀರ್ಮಾನವೇ ಬಹಳ ದಿನ ನಡೆಯಿತು. ಹೀಗಾಗಿ ಮೈತ್ರಿ ಮಾಡಿಕೊಳ್ಳವ ತೀರ್ಮಾನದಲ್ಲಿ ಬಹಳ ತಡವಾಯಿತು. ತಡವಾಗಿ ಮೈತ್ರಿ ಮಾಡಿಕೊಂಡ ಕಾರಣ ಪಕ್ಷದ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದು ಸರಿ ಮಾಡಲು ಯಾರಿಂದಲೂ ಆಗಲಿಲ್ಲ ಎಂದಿದ್ದರು.
siddaramaiah,H vishwanath,congress-jds