ಬೆಂಗಳೂರು, ಮೇ 13-ಜೆಡಿಎಸ್ ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇನ್ನಷ್ಟು ಗಟ್ಟಿಯಾಯಿತೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಇಂದು ಬೆಳಗ್ಗೆ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರು ಹೇಳಿಕೆಗಳನ್ನು ನೀಡಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗಳನ್ನು ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಕಾಂಗ್ರೆಸ್ನ ನಾಯಕರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕರಾದ ಎಸ್.ಟಿ.ಸೋಮಶೇಖರ್, ಭೆರತಿ ಸುರೇಶ್, ಸಂಸದ ಡಿ.ಕೆ.ಸುರೇಶ್, ಸಚಿವ ವೆಂಕಟರಮಣಪ್ಪ ಅವರು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡಿದರು. ಆರೋಪ-ಪ್ರತ್ಯಾರೋಪ, ವಾಕ್ಸಮರಗಳು ತಾರಕಕ್ಕೇರಿದಾಗ ಕಲಬುರಗಿಯಲ್ಲಿ ಮಾತನಾಡಿದಾಗ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಮೈತ್ರಿ ಧರ್ಮ ಉಲ್ಲಂಘಿಸಿ ಯಾರೂ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.
ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ. ಸರ್ಕಾರ ಪತನಗೊಳಿಸುವ ಬಿಜೆಪಿಯವರ ಕನಸು ಈಡೇರುವುದಿಲ್ಲ ಎಂದು ಹೇಳಿದರು.
ಇನ್ನೊಂದೆಡೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪುಟ್ಟರಾಜು ಅವರು, ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವಿನ ವಾಕ್ಸಮರಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ತಮ್ಮ ಸಮಕಾಲೀನ ರಾಜಕಾರಣಿ ಎಂಬ ಕಾರಣಕ್ಕಾಗಿ ವಿಶ್ವನಾಥ್ ಹೇಳಿಕೆಗಳನ್ನು ನೀಡಿರಬಹುದು. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಮಾತನಾಡಿದರು.
ಆದರೆ ಕಾಂಗ್ರೆಸ್ ಪಾಳಯದ ನಾಯಕರುಗಳು ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಮಾತುಗಳನ್ನಾಡಿದ್ದಾರೆ.
ಈ ನಡುವೆ ಚಿಂಚೋಳಿಯಲ್ಲಿ ಮಾತನಾಡಿರುವ ಬಿಜೆಪಿಯ ನಾಯಕರಾಗಿರುವ ಬಾಬುರಾವ್ ಚಿಂಚನಸೂರ್ ಅವರು, ಇನ್ನೆಂಟು ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬರುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಟೀಕೆಗಳನ್ನು ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ನ ಎಲ್ಲ ನಾಯಕರು ಒಟ್ಟಾಗಿ ನಿಂತು ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರ ನಾಯಕತ್ವ ಮತ್ತಷ್ಟು ಗಟ್ಟಿಯಾದಂತಿದೆ.