ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಆರ್.ವಿ.ದೇಶಪಾಂಡೆ ಟಾಂಗ್

ಬೆಂಗಳೂರು, ಮೇ.13- ಸಿದ್ದರಾಮಯ್ಯ ಆಡಳಿತಾವಧಿಯನ್ನು ಟೀಕಿಸುವ ಮೂಲಕ ಮೈತ್ರಿ ಸರ್ಕಾರದ ನಡುವಿನ ಒಳಬೇಗುದಿಯನ್ನು ವಿಶ್ವನಾಥ್ ಹೊರಹಾಕಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರದ ನಡುವೆ ಮತ್ತೊಮ್ಮೆ ಮುನಿಸು ಹೊರ ಹೊಮ್ಮಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗಿದೆ.

ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಕೆಲ ಕಾಂಗ್ರೆಸ್ ಶಾಸಕರು , ಮೈತ್ರಿ ಪಕ್ಷದ ನಡುವಳಿಕೆಯನ್ನು ಟೀಕಿಸಿದ್ದಾರೆ. ವಿಶ್ವನಾಥ್ ಹೇಳಿಕೆಗೆ ಟಾಂಗ್ ನೀಡಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಸರ್ಕಾರದ ಆಡಳಿತದವನ್ನು ಬೆಂಬಲಿಸಿದ್ದಾರೆ. ನಾನು ಇದುವರೆಗೂ ಎಂಟು ಮುಖ್ಯಮಂತ್ರಿಗಳ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಸರ್ಕಾದ ಅವಧಿಯಲ್ಲಿ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಬೇರೆ ಯಾವ ಸರ್ಕಾರದಲ್ಲಿಯೂ ಆಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೆಲವರು ಜೈಲಲ್ಲಿದ್ದು ಗೆದ್ದರೆ, ಹಾಗೇ ಎಲ್ಲ ಕೆಲಸ ಮಾಡಿದವರನ್ನು ಕೆಲವರು ಸೋಲಿಸುತ್ತಾರೆ. ಸೀಟು ಕಡಿಮೆ ಬರಲು ಹಲವು ಕಾರಣವಿರುತ್ತದೆ. ಅದು ಸರ್ಕಾರದ ಆಡಳಿತ ಸರಿಯಾಗಿ ಮಾಡಿಲ್ಲ ಎಂದು ಅರ್ಥವಲ್ಲ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲವರು ಅಭಿಮಾನದಿಂದ ಹೇಳಿದ್ದಾರೆ ಅಷ್ಟೇ. ಈ ಕುರಿತು ಯಾರೇ ಆಗಲಿ ಗೊಂದಲದ ಹೇಳಿಕೆ ನೀಡುವುದು ತಪ್ಪು. ಈ ರೀತಿಯ ಹೇಳಿಕೆಯನ್ನು ನಾನು ಖಂಡಿಸುತ್ತೆನೆ ಎಂದು ವಿಶ್ವನಾಥ್ ವಿರುದ್ದ ಹರಿಹಾಯ್ದರು.

ಎಂಟಿಬಿ ಆಕ್ರೋಶ
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬೆಂಬಲಿಸುವ ನಮ್ಮನ್ನು ಚಮಚಾ ಎಂದು ಕರೆಯುವ ವಿಶ್ವನಾಥ್ ಕೂಡ ಚಮಚಾ ಎಂದು ಸಚಿವ ಎಂಟಿಬಿ ನಾಗರಾಜ್ ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕೆಂಬುದು ನಮ್ಮ ಆಶಯ. ಜೆಡಿಎಸ್‍ನಲ್ಲಿ ಎಚ್.ವಿಶ್ವನಾಥ್ ಸ್ಥಿತಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ ಅವರು ಬಾಯಿ ಚಪಲಕ್ಕೆ ಮಾತನಾಡುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಪರ ಕೊತ್ತೂರು ಮಂಜುನಾಥ್
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲೇಬೇಕು. ಅರಸು ನಂತರದ ಅತ್ಯಂತ ಯಶಸ್ವಿ ಸಿಎಂ ಎಂದರೆ ಸಿದ್ದರಾಮಯ್ಯ ಎಂದು ಕೊತ್ತೂರು ಮಂಜುನಾಥ್ ಸಿಎಂ ಪರ ಬ್ಯಾಟಿಂಗ್ ನಡೆಸಿದರು. ಜನಪ್ರಿಯ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬುದು ನಮ್ಮ ಆಶಯ ಎಂದು ಪುನರ್ ಉಚ್ಚರಿಸಿದರು.

ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಜಮೀರ್ ಅಹ್ಮದ್ ಚಮಚಾಗಿರಿ ಮಾಡಿ ನಮಗೆ ಅಭ್ಯಾಸವಿಲ್ಲ ಎಂದಿದ್ದಾರೆ.

ವಿಶ್ವನಾಥ್ ಎಸ್.ಎಂ.ಕೃಷ್ಣಾರವರ ಚಮಚಾಗಿರಿ ಮಾಡಿದವರು. ಹೀಗಾಗಿ ವಿಶ್ವನಾಥ್ ಚಮಚಾಗಿರಿಯ ಬಗ್ಗೆ ಮಾತಾನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ಹಕ್ಕು ಎಚ್. ವಿಶ್ವನಾಥ್‍ಗೆ ಇಲ್ಲ. ನಾವು ಸಿದ್ದರಾಮಯ್ಯನವರ ಕಠ್ಠರ್ ಅಭಿಮಾನಿಗಳು. ಸಿದ್ದರಾಮಯ್ಯ ಸಿಎಮ್ ಆಗಬೇಕು ಎಂದು ರಾಜ್ಯದ ಜನರು ಬಯಸುತ್ತಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ