ಬೆಂಗಳೂರು, ಮೇ 13- ಆಡಳಿತಾರೂಢ ದೋಸ್ತಿಯಲ್ಲಿ ಹೊತ್ತಿರುವ ಬೆಂಕಿಯ ಜ್ವಾಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಭಯಪಕ್ಷಗಳ ಮುಖಂಡರು ಬಹಿರಂಗವಾಗಿಯೇ ತೊಡೆ ತಟ್ಟಿರುವುದರಿಂದ ಸಮ್ಮಿಶ್ರ ಸರ್ಕಾರದ ಭವಿಷ್ಯ 23ರ ಮೊದಲೇ ಏನಾಗಲಿದೆ ಎಂಬ ಪ್ರಶ್ನೆ ಎದುರಾಗಿದೆ.
ಇದೀಗ ಸರ್ಕಾರದಲ್ಲಿ ಆನೆ, ನಾಯಿ ರಂಗಪ್ರವೇಶ ಮಾಡಿದ್ದು, ಯಾರ ಕೈ ಮೇಲಾಗಿ, ಇನ್ಯಾರಿಗೆ ಹಿನ್ನೆಡೆಯಾಗಲಿದೆ ಎನ್ನುವುದಷ್ಟೆ ಬಾಕಿ ಉಳಿದಿದೆ. ಸೋಮವಾರ ನಡೆದಿರುವ ಕ್ಷಿಪ್ರ ಬೆಳವಣಿಗೆಗಳನ್ನು ಗಮನಿಸಿದರೆ ಸಮ್ಮಿಶ್ರ ಸರ್ಕಾರದ ತೂಗುತ್ತಿ ಎದುರಾಗಿದೆ ಎಂಬುದು ದಿಟವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಬೀದಿಯಲ್ಲಿ ನಿಂತು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ನಾವೇನು ಮುಖ್ಯಮಂತ್ರಿ ಸ್ಥಾನ ಕೇಳಲು ಬಂದಿದ್ದೇವಾ..? ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ನೇರವಾಗಿ ಸವಾಲು ಹಾಕಿದ್ದಾರೆ.
ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ನಾವೇನು ಕುಪೇಂದ್ರ ರೆಡ್ಡಿ ಕೇಳಿಕೊಂಡು ಮೈತ್ರಿ ಮಾಡಿಕೊಂಡಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
ನಾನು ಸಮನ್ವಯ ಸಮಿತಿ ಅಧ್ಯಕ್ಷನರಾಗಿರುವುದರಿಂದ ಮಾತನಾಡಲು ಬೇಕಾದಷ್ಟು ವಿಷಯಗಳಿವೆ. ಅಂದು ಜಿ.ಟಿ.ದೇವೇಗೌಡ ಇಂದು ವಿಶ್ವನಾಥ್ ಮುಂದೆ ಇನ್ಯಾರೋ.. ? ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಇನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಬೆಂಬಲಿಗರಿಂದಲೇ ಕಂಟಕ ಎಂದು ಕಿಡಿಕಾರಿದ್ದಾರೆ.
ಚಮಚಾಗಿರಿ ಮಾಡುವುದನ್ನು ನಿಲ್ಲಿಸಬೇಕು. ಯಾರನ್ನೂ ತೃಪ್ತಿಪಡಿಸಲು ಇಂತಹ ಹೇಳಿಕೆಯನ್ನು ನೀಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡರು.
ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಬೆಂಬಲಿಗ ಮತ್ತು ಶಾಸಕ ಎಚ್.ಟಿ.ಸೋಮಶೇಖರ್ ದಾರಿಯಲ್ಲಿ ಆನೆ ಹೋಗುವಾಗ ನಾಯಿ ಬೊಗಳುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುವ ಮೂಲಕ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ನೆಟ್ಟಗಿಲ್ಲ ಎನ್ನುವುದನ್ನು ರುಜುವಾತು ಮಾಡಿದರು.
ಈ ಎಲ್ಲಾ ಬೆಳವಣಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಸಿಎಂ ಈ ವರೆಗೂ ಮಾಧ್ಯಮಗಳ ಮುಂದೆ ಇಷ್ಟೆಲ್ಲ ಬೆಳವಣಿಗೆ ನಡೆದಿದ್ದರು. ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಇದು ಸಹಜವಾಗಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅವರ ಮೌನದ ಹಿಂದೆ ಕೆಲ ರಾಜಕೀಯ ತಂತ್ರ ಇರಬಹುದೆಂಬ ಗುಮಾನಿ ಎಂದಿದ್ದೆ.
ಇನ್ನು ಜೆಡಿಎಸ್ ವರಿಷ್ಠ ದೇವೇಗೌಡ ಕೂಡ ಮೌನದಿಂದ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವುದು ಭಾರೀ ರಾಜಕೀಯ ಲೆಕ್ಕಚಾರ ಅಡಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಧಳಪತಿಗಳ ಮೌನ ಕಾಂಗ್ರೆಸ್ ನಾಯಕರ ಬುಸುಗುಡುವಿಕೆ ಮೈತ್ರಿ ಸರ್ಕಾರ ವಿಚ್ಛೇದನ ಹಾದಿಗೆ ತುಳಿಯಿತೆ..? ಎಂಬ ಯಕ್ಷ ಪ್ರಶ್ನೆಯೂ ಎದುರಾಗಿದೆ.