ನವದೆಹಲಿ: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಊನದಲ್ಲಿ ತಮ್ಮ ಹೆಲಿಕಾಪ್ಟರ್ಅನ್ನು ತಾವೇ ರಿಪೇರಿ ಮಾಡುತ್ತಿರುವ ಅದಾಗಿದ್ದು, ಸದ್ಯ, ಆ ಫೋಟೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿರುವ ಈ ಫೋಟೋಗೆ 85 ಸಾವಿರ ಲೈಕ್ಸ್ಗಳು ಸಿಕ್ಕಿವೆ. ನಾವು ಪ್ರಯಾಣಿಸಬೇಕಾದ ಹೆಲಿಕಾಪ್ಟರ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ರಾಹುಲ್ ಗಾಂಧಿ ಮತ್ತು ಜೊತೆಗೆ ಇದ್ದವರೆಲ್ಲಾ ಹೆಲಿಕಾಪ್ಟರ್ ರಿಪೇರಿ ಮಾಡಲು ಸಹಾಯಕ್ಕೆ ಮುಂದಾಗಿ, ತಾವು ರಿಪೇರಿ ಕೆಲಸದಲ್ಲಿ ನಿರತರಾಗಿದ್ದಾರೆ. “ಉತ್ತಮ ಒಗ್ಗಟ್ಟಿನ ಕೆಲಸದ ಮೂಲಕ ಸಮಸ್ಯೆ ಸರಿಪಡಿಸಲಾಗಿದೆ,” ಎಂದು ರಾಹುಲ್ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
“ಒಗ್ಗಟ್ಟಿನ ಕೆಲಸ ಅಂದರೆ ಡೆಕ್ನಲ್ಲಿ ಇದ್ದವರೆಲ್ಲರೂ ಕೈ ಜೋಡಿಸಿ, ಹೆಲಿಕಾಪ್ಟರ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಒಗ್ಗಟಿನಿಂದ ಕೆಲಸ ಮಾಡಿದರೆ ಶೀಘ್ರದಲ್ಲಿ ಎಲ್ಲ ಸಮಸ್ಯೆ ಪರಿಹಾರ ಆಗಲಿವೆ. ಗಂಭೀರವಾದ ಸಮಸ್ಯೆ ಏನಿಲ್ಲ, ಧನ್ಯವಾದಗಳು,” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 23ರಂದು ಏಳು ಹಂತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಎಲ್ಲ ಪಕ್ಷಗಳ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ಗಳನ್ನು ಚುನಾವಣಾ ಪ್ರಚಾರಕ್ಕೆ ಯಥೇಚ್ಚವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಒಂದು ಸಂದೇಶವನ್ನು ದೇಶದ ಜನರಿಗೆ ಕ್ಷಣಾರ್ಧದಲ್ಲಿ ತಲುಪಿಸಲು ಈ ಮಾಧ್ಯಮಗಳು ಸಹಕಾರಿಯಾಗಿವೆ.