ಬೆಂಗಳೂರು,ಮೇ 11- ನಾವೇನು ರಾಜಕೀಯ ಸನ್ಯಾಸಿಗಳಲ್ಲ. 23ರ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಏನಾಗಲಿದೆ ಎಂಬುದು ಕಾದು ನೋಡಿ.
ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ನ 20 ಮಂದಿ ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದ ಯಡಿಯೂರಪ್ಪ ಇಂದು ಒಂದು ಹೆಜ್ಜೆ ಮುಂದೆ ಹೋಗಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯಲಿದೆ ಎಂಬ ಸುಳಿವು ನೀಡಿದ್ದಾರೆ.
ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಪರ ಪ್ರಚಾರ ನಡೆಸಲು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿರುವ ಯಡಿಯೂರಪ್ಪ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ನಾಯಕತ್ವವನ್ನು ಒಪ್ಪಿಕೊಳ್ಳದ ಅನೇಕ ಮಂದಿ ಶಾಸಕರು ಲೋಕಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶ ಪ್ರಕಟಗೊಂಡ ದಿನವೇ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ. ಪ್ರತಿಪಕ್ಷವಾಗಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಸರ್ಕಾರದಲ್ಲಿ ಅತೃಪ್ತಿ ಎಂಬುದು ಎದ್ದುಕಾಣುತ್ತಿದೆ.ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸವಾಗುತ್ತಿಲ್ಲ ಎಂದು ಅನೇಕ ಶಾಸಕರು ನೊಂದಿದ್ದಾರೆ. ಕೆಲವೇ ಕೆಲವರಿಗೆ ಮಾತ್ರ ಸರ್ಕಾರ ಮುಂದುವರೆಯಬೇಕಿದೆ.ಅತೃಪ್ತ ಶಾಸಕರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಂತಿದೆ ಎಂದು ಹೇಳಿದರು.
ನಾವು ಯಾರನ್ನು ಬಲವಂತವಾಗಿ ಪಕ್ಷಕ್ಕೆ ಕರೆತರುವುದಿಲ್ಲ. ಅನೇಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಫಲಿತಾಂಶ ಪ್ರಕಟವಾಗುವುದನ್ನೇ ಬಹುತೇಕರು ಎದುರು ನೋಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸೋತು ಸುಣ್ಣವಾಗಲಿದೆ. ಮೈಸೂರಿನಲ್ಲೂ ನಮ್ಮ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲ್ಲಲಿದ್ದಾರೆ.
ನಂತರ ಸರ್ಕಾರದಲ್ಲಿ ಬಡಿದಾಟ ಆರಂಭವಾಗುತ್ತದೆ ಎಂದರು.
ಸರ್ಕಾರ ಮುಂದುವರೆಯುವುದು ಅನೇಕ ಶಾಸಕರಿಗೆ ಸುತಾರಾಮ್ ಇಷ್ಟವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು ಎಂದು ಖುದ್ದು ಸಿದ್ದರಾಮಯ್ಯನವರೇ ಪಿತೂರಿ ನಡೆಸುತ್ತಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ದಿನಕ್ಕೊಂದು ಹೇಳಿಕೆ ಕೊಡಿಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ನಾನು ಸರ್ಕಾರವನ್ನು ಎಲ್ಲಿಯೂ ಕೂಡ ಅಸ್ಥಿರಗೊಳಿಸುವಂತಹ ಕೆಲಸ ಮಾಡುತ್ತಿಲ್ಲ. ಅಧಿಕೃತ ವಿರೋಧ ಪಕ್ಷವಾಗಿ ಜನಪರವಾಗಿ ಹೋರಾಟ ಮಾಡುತ್ತಿದ್ದೇವೆ. ಅಧಿಕಾರಕ್ಕಾಗಿ ಎರಡೂ ಪಕ್ಷದವರು ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರು ದಿನಕ್ಕೆ ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೆಲ್ಲದಕ್ಕೂ ಸಿದ್ದರಾಮಯ್ಯನವರ ಬೆಂಬಲವಿದೆ ಎಂದು ಆರೋಪಿಸಿದರು.
ಚಿಂಚೋಳಿ ಮತ್ತು ಕುಂದಗೋಳದಲ್ಲಿ ಕಾಂಗ್ರೆಸ್-ಜೆಡಿಎಸ್ ಏನೇ ತಿಪ್ಪರಲಾಗ ಹಾಕಿದರೂ ಗೆಲ್ಲುವುದಿಲ್ಲ. ಜನತೆ ಬದಲಾವಣೆ ಮಾಡಬೇಕೆಂದು ತೀರ್ಮಾನಿಸಿರುವುದರಿಂದ ಎರಡು ಕಡೆ ನಮ್ಮ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ನಾವು ನಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.