ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳಿಂದ ರಕ್ಷಣಾತ್ಮಕ ತಂತ್ರ

ಬೆಂಗಳೂರು, ಮೇ11- ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ.

ಈ ಮೂಲಕ ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯಗಳನ್ನು ಅರಿತೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಕ್ಷಣಾತ್ಮಕ ತಂತ್ರ ಅನುಸರಿಸಲು ತಮ್ಮದೇ ಆದ ಕಾರ್ಯತಂತ್ರ ರೂಪಿಸಿವೆ.

23ರ ನಂತರ ಯಾವುದೇ ಶಾಸಕರು ವಿದೇಶ ಪ್ರವಾಸ ಇಲ್ಲವೇ ಕುಟುಂಬ ಪ್ರವಾಸ ಕೈಗೊಳ್ಳಬಾರದೆಂದು ಎಲ್ಲ ಪಕ್ಷಗಳ ಮುಖಂಡರು ಸೂಚನೆ ಕೊಟ್ಟಿದ್ದಾರೆ.

ಅದರಲ್ಲೂ ಈ ಬಾರಿ ಸರ್ಕಾರ ರಚಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಈಗಾಗಲೇ ಎಲ್ಲ ಶಾಸಕರ ಜೊತೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದು, 23ರ ನಂತರ ಪ್ರತಿಯೊಬ್ಬ ಶಾಸಕರು ನನ್ನ ಸಂಪರ್ಕದಲ್ಲಿರಬೇಕೆಂದು ತಾಕೀತು ಮಾಡಿದ್ದಾರೆ.

ನೀವು ಎಲ್ಲಿಗೆ ಹೋದರೂ ನನ್ನ ಗಮನಕ್ಕೆ ತರಬೇಕು.ಕುಟುಂಬ ಪ್ರವಾಸಕ್ಕೆ ಹೋಗುವುದಾಗಲಿ ಇಲ್ಲವೇ ಹೊರರಾಜ್ಯಕ್ಕೆ ಹೋಗುವುದಾದರೆ ಪಕ್ಷದ ಅನುಮತಿಯನ್ನು ಪಡೆಯಬೇಕು.ಇಲ್ಲವೇ ನೀವು ಯಾವ ದೂರವಾಣಿಯಲ್ಲಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿಯನ್ನು ನೀಡಬೇಕು. 23ರೊಳಗೆ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಬಿಜೆಪಿಯಲ್ಲಿರುವ ಕೆಲವು ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆಂಬ ಗುಮಾನಿ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಬಿಎಸ್‍ವೈ ಈ ತಂತ್ರವನ್ನು ರೂಪಿಸಿದ್ದಾರೆ.

ಕನಿಷ್ಟ ನಾಲ್ಕರಿಂದ 5 ಶಾಸಕರು ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆಂಬ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ವಿಫಲವಾಗಬಾರದೆಂಬ ಕಾರಣಕ್ಕೆ ಬಿಜೆಪಿ ಈ ತಂತ್ರಕ್ಕೆ ಮೊರೆ ಹೋಗಿದೆ.

ಕಾಂಗ್ರೆಸ್‍ನಲ್ಲೂ ಇದೇ ತಂತ್ರ:
ಇನ್ನು ಕಾಂಗ್ರೆಸ್‍ನಲ್ಲಿ ಆಪರೇಷನ್ ಕಮಲದ ಭೀತಿಯಿಂದ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಖುದ್ದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ.

ಬಿಜೆಪಿಯವರು ಶಾಸಕರನ್ನು ಸೆಳೆಯಲು ಎಲ್ಲ ತಂತ್ರಗಳನ್ನು ನಡೆಸಲಿದ್ದಾರೆ ಎಂಬ ಹಿನ್ನಲೆಯಲ್ಲಿ 23ರ ನಂತರ ಯಾವುದೇ ಶಾಸಕರು ನನ್ನ ಅನುಮತಿ ಇಲ್ಲದೆ ಎಲ್ಲಿಯೂ ಹೋಗಬಾರದೆಂದು ತಾಕೀತು ಮಾಡಿದ್ದಾರೆ.

ವಿಶೇಷವಾಗಿ ಶಾಸಕ ರಮೇಶ್ ಜಾರಕಿಹೊಳಿ, ಭಿನ್ನಮತೀಯ ಶಾಸಕರಾದ ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಪ್ರತಾಪ್‍ಗೌಡ ಪಾಟೀಲ್, ಬಸವರಾಜ್ ದದ್ದಲ್ ಸೇರಿದಂತೆ ಹಲವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಇತ್ತ ಜೆಡಿಎಸ್ ಕೂಡ ತನ್ನೆಲ್ಲ ಶಾಸಕರನ್ನು ಈಗಾಗಲೇ ಹಿಡಿದಿಟ್ಟುಕೊಳ್ಳುವ ಸಲುವಾಗಿ ಫಲಿತಾಂಶ ಮುಗಿಯುತ್ತಿದ್ದಂತೆ ರೆಸಾರ್ಟ್‍ಗೆ ಕರೆದೊಯ್ಯಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಶಾಸಕರು ರೆಸಾರ್ಟ್‍ಗೆ ಹೋದರೆ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಬಹುದೆಂಬ ಭೀತಿಯಿಂದಾಗಿ ಏನು ಮಾಡಬೇಕೆಂಬ ಗೊಂದಲದಲ್ಲಿ ದಳಪತಿಗಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ