ಬೆಂಗಳೂರು, ಮೇ 11-ಲೋಕಸಭಾ ಚುನಾವಣೆಯಲ್ಲಿ ತಾವು ಹಾಕಿದ ಮತ ಬಿಜೆಪಿಗೆ ಹೋಗಿದೆ ಕೇಂದ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ಮುಖಂಡ ಶರದ್ ಪವಾರ್ ಮಾಡಿದ ಗಂಭೀರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಅಭ್ಯರ್ಥಿಯೇ ಇಲ್ಲದ ಕಡೆ ಮತ ಹಾಕಿರುವುದು ಯಾರಿಗೆ ಎಂದು ಪ್ರಶ್ನಿಸಿದೆ.
ಶರದ್ ಪವಾರ್ ಅವರು ಮತ ಹಾಕಿರುವುದು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ. ಅಲ್ಲಿ ಬಿಜೆಪಿ ಅಭ್ಯರ್ಥಿಯೇ ಸ್ಪರ್ಧಿಸಿಲ್ಲ. ಹಾಗಿದ್ದ ಮೇಲೆ ಕಮಲ ಚಿಹ್ನೆಗೆ ಮತ ಹಾಕಿರುವುದು ಹೇಗೆ? ಎಂದು ಕರ್ನಾಟಕ ಬಿಜೆಪಿ ಟ್ವೀಟರ್ನಲ್ಲಿ ಪ್ರಶ್ನಿಸಿದೆ.
ಒಂದು ಶರದ್ ಪವಾರ್ ಸುಳ್ಳು ಹೇಳಿರಬೇಕು ಅಥವಾ ಅವರೇ ಖುದ್ದಾಗಿ ಮತ ಯಂತ್ರಗಳನ್ನು ತಿರುಚಿರಬೇಕು ಎಂದು ಬಿಜೆಪಿ ಆರೋಪಿಸಿದೆ.
ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ, ಬದಲಿಗೆ ಆ ಕ್ಷೇತ್ರವನ್ನು ಶಿವಸೇನೆಗೆ ಬಿಟ್ಟುಕೊಟ್ಟಿದೆ.
ಏ.29 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಸಿಪಿ ಅಭ್ಯರ್ಥಿಗೆ ಮತ ಹಾಕಿದಾಗ ಅದು ಬಿಜೆಪಿ ಚಿಹ್ನೆಗೆ ಹೋಗಿತ್ತು.ಇದನ್ನು ಖುದ್ದಾಗಿ ನಾನು ನೋಡಿದ್ದೆ. ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲೂ ಇದೇ ರೀತಿ ಆರೋಪಗಳು ಕೇಳಿ ಬಂದಿದ್ದವು ಎಂದು ಶರದ್ ಪವಾರ್ ನಿನ್ನೆ ಹೇಳಿಕೆ ನೀಡಿದ್ದರು.