ರಾಜಕೀಯ ವ್ಯಕ್ತಿಗಳು ನಾಟಕದ ಕಲಾವಿದರಾಗಿದ್ದಾರೆ-ಸಾಹಿತಿ ದೊಡ್ಡರಂಗೇಗೌಡ

ಬೆಂಗಳೂರು, ಮೇ 11-ರಾಜಕೀಯ ವ್ಯಕ್ತಿಗಳು ನಾಟಕದ ಕಲಾವಿದರಾಗಿದ್ದಾರೆ. ಹೋದ ಕಡೆ ಕಣ್ಣೀರು ಹಾಕುತ್ತಾರೆ ಎಂದು ಪದ್ಮಶ್ರೀ ಡಾ.ದೊಡ್ಡರಂಗೇಗೌಡರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಡಾ.ವಿ.ಗೋಪಾಲಕೃಷ್ಣ ಭಾಷಾ ಲೋಕ ಪ್ರತಿಷ್ಠಾನ ವತಿಯಿಂದ ಪ್ರತಿಷ್ಠಾನದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳು ನಾಟಕದ ಪಾತ್ರಧಾರಿಗಳಂತೆ ವರ್ತಿಸುತ್ತಾರೆ. ಇದರ ಬಗ್ಗೆ ಇನ್ನೂ ಹೆಚ್ಚು ವರ್ಣಿಸಲು ಹೋದರೆ ಸಮಯ ಸಾಲದು, ಕಾರ್ಯಕ್ರಮದ ಆಶಯವೂ ವ್ಯರ್ಥವಾಗುತ್ತದೆ. ಹಾಗಾಗಿ ರಾಜಕಾರಣದ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದರು.

ರಾಜಕಾರಣದಲ್ಲಿರುವಂತೆ ಸಾಹಿತ್ಯ ಲೋಕದಲ್ಲೂ ರಾಜಕೀಯ ತುಂಬಿ ಹೋಗಿದೆ. ಇದು ಅತ್ಯಂತ ಬೇಸರದ ಸಂಗತಿ ಹಾಗೂ ವಿಷಾದನೀಯ ಎಂದು ಹೇಳಿದರು.

ಹಳ್ಳಿಯಿಂದ ನಗರಕ್ಕೆ ಬಂದರೆ ನಾವು ಇಲ್ಲದಂತಾಗಿಬಿಡುತ್ತೇವೆ ಎಂಬ ಮನೋಭಾವನೆ ಹಲವರಲ್ಲಿ ಇರುತ್ತದೆ. ಇಂತಹ ನಗರದಲ್ಲೂ ಸಲ್ಲಬಹುದು ಎಂಬುದಕ್ಕೆ ಡಾ.ವಿ.ಗೋಪಾಲಕೃಷ್ಣ ಅವರು ಸಾಕ್ಷಿಯಾಗಿದ್ದಾರೆ ಎಂದು ನುಡಿದರು.

ಮುನ್ನುಗ್ಗುವ ಪ್ರವೃತ್ತಿ ವಿ.ಗೋಪಾಲಕೃಷ್ಣ ಅವರದು.ಶ್ರದ್ಧಾವಂತ ಶ್ರಮಜೀವಿ ಎಂದೇ ಕರೆಯಬಹುದಾಗಿದೆ ಎಂದು ಹೇಳಿದರು.

ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನವತಿಯಿಂದ ಅರ್ಹರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಅಭಿಜಾತರಿಗೆ ಅಭಿಜಾತ ಮನ್ನಣೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿಯನ್ನು ಕೊಡುವಾಗ ವಿದ್ವತ್ತಿಗೆ ಮನ್ನಣೆ ನೀಡಬೇಕೇ ಹೊರತು ಶಿಫಾರಸ್ಸಿಗಲ್ಲ. ಇಂತಹ ಪ್ರಶಸ್ತಿ ನೊಬೆಲ್‍ಗೆ ಸಮನಾಗಿರುತ್ತದೆ. ಹಾಗಾಗಿ ಅರ್ಹರಿಗೆ ಪ್ರಶಸ್ತಿ ಸಿಗಬೇಕು ಎಂದು ದೊಡ್ಡರಂಗೇಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ಗೌರಿಬಿದನೂರಿನ ಪ್ರಜ್ಞಾ ಟ್ರಸ್ಟ್‍ನ ವಿಜಯಲಕ್ಷ್ಮಿ ಎನ್.ನಾಗರಾಜ್ ದಂಪತಿ ನಿರ್ಮಿಸಿರುವ ಡಾ.ವಿ.ಗೋಪಾಲಕೃಷ್ಣ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಯಿತು.ಇದೇ ವೇಳೆ ಇವರನ್ನು ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೊವ್ವೆರಿಯಂಡ ನಂಜಮ್ಮ- ಬಿ.ಎಂ.ಚಿಣ್ಣಪ್ಪ ದಂಪತಿಗೆ ಡಾ.ವಿ.ಗೋಪಾಲಕೃಷ್ಣ ಭಾಷಾಲೋಕ ಪ್ರತಿಷ್ಠಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರಾದ ಡಾ.ಎಚ್.ಎಸ್.ಗೋಪಾಲ ರಾವ್, ಡಾ.ಆರ್.ಶೇಷಶಾಸ್ತ್ರಿ, ಬಹುಭಾಷಾ ತಜ್ಞ ಡಾ.ವಿ.ಗೋಪಾಲಕೃಷ್ಣ, ಸಂಶೋಧಕರಾದ ಡಾ.ಕೆ.ಆರ್.ಸಂಧ್ಯಾರೆಡ್ಡಿ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಕೆ.ಎಂ.ಲೋಕೇಶ್, ಪ್ರತಿಷ್ಠಾನದ ಅಧ್ಯಕ್ಷ ಕಾ.ನಾ.ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ