ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ತಲಾ 10ಲಕ್ಷ ಪರಿಹಾರ-ಸಚಿವೆ ಜಯಮಾಲ

ಉಡುಪಿ, ಮೇ 11-ಮೀನುಗಾರರ ಸುವರ್ಣತ್ರಿಭುಜ ಬೋಟ್ ಅಪಘಾತದಲ್ಲಿ ನಾಪತ್ತೆಯಾಗಿರುವ ಏಳು ಮೀನುಗಾರರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ.ಗಳ ಪರಿಹಾರವನ್ನು ರಾಜ್ಯಸರ್ಕಾರ ಘೋಷಣೆ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಯಮಾಲಾ ಅವರು, ಮೀನುಗಾರರ ಕುಟುಂಬಕ್ಕೆ ಈಗಾಗಲೇ ರಾಜ್ಯ ಸರ್ಕಾರ ಒಂದು ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಿದೆ. ಅದರ ಜೊತೆಯಲ್ಲಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ಸೇರಿ ಪ್ರತಿ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು.

ಆ ಕುಟುಂಬಗಳಿಗೆ ಇನ್ನಷ್ಟು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡಲಾಗಿದೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದರು.

ಕಳೆದ ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗಾಗಿ ಸಮುದ್ರ ನಡು ಭಾಗಕ್ಕೆ ಹೋಗಿದ್ದ ಸುವರ್ಣತ್ರಿಭುಜ ಬೋಟ್ ನಾಪತ್ತೆಯಾಗಿತ್ತು.ಸತತ ಪರಿಶೋಧನೆ ನಂತರ ಕಳೆದ ವಾರ ಮಹಾರಾಷ್ಟ್ರದ ಮಲ್ವನ್ ಪ್ರದೇಶದ ಸಮುದ್ರ ಭಾಗದಲ್ಲಿ ಬೋಟಿನ ಅವಶೇಷಗಳು ಪತ್ತೆಯಾಗಿದ್ದವು.

ಬೋಟ್‍ನಲ್ಲಿ ತೆರಳಿದ್ದ ಚಂದ್ರಶೇಖರ್ ಕೊಟ್ಯಾನ್ ಬಡಾನಿಡಿಯೂರು, ಮಾದನಗೇರಿಯ ಸತೀಶ್, ದಾಮೋದರ್‍ತಿಂಗಳಾಯ ಬಡಾನಿಡಿಯೂರು, ಕುಮುಟಾದ ವಲನಗದ್ದೆಯ ಲಕ್ಷ್ಮಣ, ಹೊನ್ನಾವರ ಮಂಕಿಯ ರವಿ, ಭಟ್ಕಳ ಅಳ್ವೆ ಕೋಡಿಯಾ ಹರೀಶ್, ಭಟ್ಕಳ ಬೆಳ್ನಿಯ ರಮೇಶ್ ಅವರು ನಾಪತ್ತೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ