ಬೆಂಗಳೂರು, ಮೇ 10-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ತಂದೆ ಮೇಲಿನ ಸಿಟ್ಟು, ಕೋಪ ಇನ್ನೂ ದೂರವಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ತಿಳಿಸಿದ್ದಾರೆ.
ವಿನೋದ ಪಾಟೀಲ್ ಸ್ನೇಹ ಬಳಗ ಹಾಗೂ ವಿಶ್ವನಾಥ್ ಅಭಿಮಾನಿ ಬಳಗದ ವತಿಯಿಂದ ಇಂದು ಎಚ್.ವಿಶ್ವನಾಥ್ ಅವರ 71ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಮ್ಮ ತಂದೆ ವಿಶ್ವನಾಥ್ ಅವರನ್ನು ಕಡೆಗಣಿಸಿದ್ದರು.
ಈ ವಯಸ್ಸಿನಲ್ಲೂ ನಮ್ಮ ತಂದೆಯ ಮನಸ್ಸು ನೋಯಿಸುತ್ತಿರುವುದಕ್ಕೆ ಬೇಸರವಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಜೊತೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಂತೆ ನಮ್ಮ ತಂದೆ ಜೊತೆಯೂ ವೇದಿಕೆ ಹಂಚಿಕೊಳ್ಳಬೇಕಿತ್ತು. ಆದರೆ ಹಾಗಾಗಲಿಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದು ಮುಖ್ಯಮಂತ್ರಿಯಾಗುವವರೆಗೂ ಜೊತೆಗಿದ್ದ ನಮ್ಮ ತಂದೆಯನ್ನು ಕಡೆಗಣಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಚುನಾವಣೆ ವೇಳೆ ಹುಣಸೂರಿನಲ್ಲಿ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ವೇದಿಕೆ ಹಂಚಿಕೆಕೊಳ್ಳಲೇ ಇಲ್ಲ. ಆದರೂ ಕೊಡಗು ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್ಶಂಕರ್ ಪರವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ರಾಮಾನುಜ ರಸ್ತೆಯಲ್ಲಿರುವ ಕಾಮೇಶ್ವರ ದೇವಾಲಯದಲ್ಲಿ ವಿಶ್ವನಾಥ್ ಕುಟುಂಬವರ್ಗದವರು ವಿಶೇಷ ಪೂಜೆ ಸಲ್ಲಿಸಿದ್ದರು.