ಕೆಆರ್‍ಡಿಸಿಎಲ್‍ನಿಂದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ

ಬೆಂಗಳೂರು, ಮೇ 10-ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ನಿರ್ಮಾಣ ಮಾಡುವ ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‍ಡಿಸಿಎಲ್) ಆರಂಭಿಸಲಿದೆ.

ಈ ಯೋಜನೆ ನಾಲ್ಕು ಹಂತಗಳಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಸಂಚಾರ ದಟ್ಟಣೆ ನಿವಾರಣೆ, ತಡೆರಹಿತ ಸಾರಿಗೆ ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.

ಈ ಸಂಬಂಧ ಕೆಆರ್‍ಡಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್.ಶಿವಕುಮಾರ್ ಮಾತನಾಡಿ, ಉದ್ದೇಶಿತ ಯೋಜನೆಯು 87.87 ಕಿಲೋ ಮೀಟರ್ ಉದ್ದದ ಬಹುಪಥದ ರಸ್ತೆಗಳನ್ನು ನಿರ್ಮಾಣ ಮಾಡಲಿದ್ದು, ಇದರಿಂದ ನಗರದ ಯಾವುದೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಲು ಕೇವಲ 45 ನಿಮಿಷ ಸಾಕಾಗುತ್ತದೆ. ಅಂದರೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡರೆ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತಲುಪಲು 100 ನಿಮಿಷಕ್ಕೆ ಬದಲಾಗಿ 35 ನಿಮಿಷ ಸಾಕಾಗುತ್ತದೆ ಎಂದು ತಿಳಿಸಿದರು.

ನಗರದ ಸಾರಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಸಮಗ್ರ ಪರಿಹಾರವಾಗಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಗೊಳ್ಳುತ್ತಿದೆ. ಹಾಲಿ ಇರುವ ಸಬರ್ಬನ್ ರೈಲು ಜಾಲ, ಪ್ರಸ್ತುತದ ಮತ್ತು ಉದ್ದೇಶಿತ ಮೆಟ್ರೋ ರೈಲು ಜಾಲ, ಮೇಲ್ಸೇತುವೆಗಳು, ಆರ್‍ಒಬಿಗಳು ಮತ್ತು ವರ್ತುಲ ರಸ್ತೆಗಳೊಂದಿಗೆ ಈ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯು ಬರುವುದರಿಂದ ಬೆಂಗಳೂರು ನಗರದ ಸಾರಿಗೆ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಅಲ್ಲದೆ, ನಗರದ ಸಾರಿಗೆ ಮೂಲಸೌಕರ್ಯವೂ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಎಲಿವೇಟೆಡ್ ಕಾರಿಡಾರ್ ರಸ್ತೆಗಳು ಬಸ್ ಸಂಚಾರಕ್ಕೆಂದೇ ಪ್ರತ್ಯೇಕ ಪಥ ಮತ್ತು ಪ್ರತಿ ಮೂರು ಕಿಲೋಮೀಟರ್‍ಗೆ ಒಂದರಂತೆ ಬಸ್ ನಿಲ್ದಾಣಗಳನ್ನು ಹೊಂದಿರುತ್ತವೆ. ಈ ಕಾರಿಡಾರ್‍ಗಳಿಂದ ಸಮಯ ಉಳಿತಾಯ ವಾಗುವುದಲ್ಲದೆ, ಜೀವ ರಕ್ಷಕ ಕಾರಿಡಾರ್‍ಗಳಾಗಲಿವೆ. ಈ ಕಾರಿಡಾರ್‍ಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು. ಕಡಿಮೆ ಸಿಗ್ನಲ್‍ಗಳು ಇದ್ದು, ಅಡೆತಡೆಗಳು ಕಡಿಮೆ ಇರುವುದರಿಂದ ವಾಹನಗಳು ದಟ್ಟಣೆ ಹಾಗೂ ವಾಯು ಮಾಲಿನ್ಯ ಕಡಿಮೆಯಾಗಲಿದೆ.

ಕೆಆರ್ ಪುರಂನಿಂದ ಯಶವಂತಪುರಕ್ಕೆ 30 ನಿಮಿಷದಲ್ಲಿ ಮತ್ತು ವರ್ತೂರು ಕೋಡಿಯಿಂದ ಲಾಲ್‍ಬಾಗ್‍ಗೆ ಕೇವಲ 20 ನಿಮಿಷದಲ್ಲಿ ತಲುಪಲು ಸಾಧ್ಯವಾಗುವಂತಹ ಕಾರಿಡಾರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ