ಮೈಸೂರು, ಮೇ 10-ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮಹಿಳಾ ಪೊಲೀಸರ ಅವಶ್ಯಕತೆಯಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಜ್ಯೋತಿ ನಗರದಲ್ಲಿರುವ ಪೊಲೀಸ್ ಶಾಲೆಯಲ್ಲಿ ಇಂದು ನಡೆದ ಮೂರನೇ ತಂಡದ ಮಹಿಳಾ ಕಾನ್ಸ್ಟೆಬಲ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ, ಹಿಂಸೆಗಳ ಕುರಿತು ಮಹಿಳಾ ಪೊಲೀಸರು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು ಸಂವೇದನಾಶೀಲರಾಗಿರುತ್ತಾರೆ.
ಹಾಗಾಗಿ ಪೊಲೀಸ್ ಇಲಾಖೆಗೆ ಹೆಚ್ಚಿನ ಮಹಿಳಾ ಪೊಲೀಸರ ಅಗತ್ಯವಿದೆ ಎಂದರು.
ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು ಪ್ರಾಯೋಜಿತವಾಗಿ ಪೊಲೀಸ್ ಇಲಾಖೆಗೆ ಸೇರುತ್ತಿದ್ದೀರಿ. ಈಗಾಗಲೇ ನಿಮಗೆ ಔಪಚಾರಿಕವಾಗಿ ಪತ್ರ ನೀಡಲಾಗಿದೆ. ಎಂಟು ತಿಂಗಳ ತರಬೇತಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯ ಪೊಲೀಸ್ ಇಲಾಖೆ ಕುಟುಂಬ ಸೇರುತ್ತಿದ್ದೀರಿ. ಇನ್ನು ಮಂದೆ ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ ಎಂದರು.
ಕಳೆದ 50 ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಮಹಿಳೆಯರು ಏಕೆ ಬೇಕು ಎಂಬ ಪ್ರಶ್ನೆ ಇತ್ತು ಗಲಭೆಯನ್ನು ನಿಯಂತ್ರಿಸಲು, ಗೋಲಿಬಾರ್, ಲಾಠಿಚಾರ್ಜ್ ಮಾಡಬೇಕು ಮಹಿಳೆಯರಿಗೆ ಇದೆಲ್ಲಾ ಏಕೆ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದರು.
ನಮ್ಮ ಸಮಾಜದಲ್ಲಿ ಎಷ್ಟೋ ಅಪರಾಧಗಳು ನಡೆಯುತ್ತದೆ. ಆದರೆ ಶೇ.50ರಷ್ಟು ಪ್ರಕರಣಗಳು ಮಕ್ಕಳು, ಮಹಿಳೆಯರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಮಹಿಳಾ ಪೊಲೀಸರು ಸಮರ್ಥರು ಎಂದರು.
ಇಂದಿನ ಕಾರ್ಯಕ್ರಮದಲ್ಲಿ 217 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ತರಬೇತಿ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಎಸ್.ರವಿ, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ಧರಣಿ ದೇವಿ ಮಾಲಗತ್ತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.