ನಿಖಿಲ್ ಸೋಲು ಗೆಲುವಿನ ಮೇಲೆ ರಾಜಕಾರಣ ನಿಂತಿಲ್ಲ-ಮಾಜಿ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಮೇ 10-ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲು-ಗೆಲುವಿನ ಮೇಲೆ ರಾಜಕಾರಣ ನಿಂತಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೂ, ಮಂಡ್ಯ ರಾಜಕಾರಣಕ್ಕೂ ತಳಕು ಹಾಕುವುದನ್ನು ಬಿಡಿ. ರಾಜಕಾರಣ ಬಹಳ ಮುಂದೆ ಹೋಗಿದೆ ಎಂದು ಹೇಳಿದರು.

ಸಚಿವ ಜಿ.ಟಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಹಾಗಿದ್ದು ಮಂತ್ರಿಯಾಗಿದ್ದವರು ನೀಡಿದ ಹೇಳಿಕೆ ಸರಿಯಲ್ಲ ಎಂದರು.

ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಹಾಗೂ ಇತರರ ಬಗ್ಗೆ 1994ರಿಂದಲೂ ನಾನು ಮಾತನಾಡುವುದನ್ನು ಬಿಟ್ಟಿದ್ದೇನೆ. ಅವರು ಯಾವುದೇ ರೀತಿ ಹೇಳಿಕೆ ನೀಡಿದರೂ ನನ್ನ ಘನತೆಗೆ ಧಕ್ಕೆಯಾಗುವುದಿಲ್ಲ. ರಾಜಕಾರಣದ ವ್ಯಭಿಚಾರ ಎಂಬ ಪದಬಳಕೆ ನನಗೆ ಆಶ್ಚರ್ಯವನ್ನೂ ತಂದಿಲ್ಲ, ವಿಶೇಷವಾಗಿಯೂ ಕಂಡುಬಂದಿಲ್ಲ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದೂ ಇಲ್ಲ, ಏನು ಬೇಕಾದರೂ ಮಾತನಾಡಿಕೊಳ್ಳಲಿ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆಸಬೇಕೆಂದು ನಾನು ಮನವಿ ಮಾಡಿದ್ದೇನೆ. ಒಕ್ಕೂಟ ಚೆನ್ನಾಗಿ ಕೆಲಸ ಮಾಡುತ್ತಿದೆ. ಆ ಸಂಸ್ಥೆಗೆ ಯಾರೂ ಬೇಕಾದರೂ ಆಯ್ಕೆಯಾಗಲಿ. ಮೊದಲು ಚುನಾವಣೆ ಮಾಡಿ ಎಂದು ನಾನು ಮನವಿ ಮಾಡಿದ್ದೇನೆ.

ನಾನು ಯಾರ ಜೊತೆ ಊಟ ಮಾಡ್ತೀನಿ, ಬಿಡ್ತೀನಿ ಎನ್ನುವುದು ನನ್ನ ವೈಯಕ್ತಿಕ ವಿಚಾರ ಹಾಗೂ ಖಾಸಗಿತನ. ಅದನ್ನು ಕೇಳುವ ಅಗತ್ಯವಿಲ್ಲ.ಬೇರೊಬ್ಬರ ಜೊತೆ ಸಭೆ ಮಾಡಿ ಯಾವುದೋ ಆಸೆಗಾಗಿ ನಾನು ಬೇರೊಂದು ರೀತಿಯ ರಾಜಕಾರಣ ಮಾಡುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ಆಣೆ, ಪ್ರಮಾಣ ಮಾಡಿ ಮಾತನಾಡುವ ಅಭ್ಯಾಸವೂ ನನಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ನಾಯಕರು. ಅವರು ಕರೆಯದಿದ್ದರೂ ಅವರನ್ನು ನಾನು ಹೋಗಿ ಭೇಟಿ ಮಾಡುತ್ತೇನೆ.

ಸುಮಲತಾ ಹಾಗೂ ಇತರ ಮಾಜಿ ಶಾಸಕರ ಜೊತೆ ನಾವು ಊಟ ಮಾಡಿದ್ದನ್ನು ಹೊಟೇಲ್‍ನ ಸಿಸಿ ಟಿವಿ ಮೂಲಕ ಹೊರತೆಗೆಸಿ ಏನೆಲ್ಲ ಪ್ರಯತ್ನಗಳು ನಡೆಸಿದ್ದಾರೆ ಎಂದು ನನಗೆ ಗೊತ್ತಿದೆ.ಅದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಸುಮ್ಮನೆ ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡುವವನಲ್ಲ. ಯಾರು, ಎಷ್ಟೇ ಮಾತನಾಡಿದರೂ ಪ್ರಚೋದನೆಗೆ ಒಳಗಾಗುವುದಿಲ್ಲ. ಸಾಮಾನ್ಯನಂತೆ ಇರುತ್ತೇನೆ, ಇದ್ದೇನೆ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಇರಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಅದರಂತೆ ನಡೆಯುತ್ತಿದೆ.ಸಂದೇಶ್ ಪ್ರಿನ್ಸ್ ನನಗೆ 25 ವರ್ಷಗಳಿಂದ ಗೊತ್ತಿದ್ದಾರೆ. ಅವರ ಜೊತೆ ಪ್ರತ್ಯೇಕ ಸಭೆ ಮಾಡುವ ಅಗತ್ಯವಿಲ್ಲ. ನಾನು ಅವರ ಹೊಟೇಲ್‍ನಲ್ಲಿದ್ದಾಗ ಅಲ್ಲಿ ಬೇರೆ ಯಾರಿದ್ದರೋ ಗೊತ್ತಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ