ಬೆಂಗಳೂರು, ಮೇ 10- ಪಾಲಿಕೆಯ ಉತ್ತಮ ನೌಕರರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ತೀರ್ಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸ್ವತಃ ಮೇಯರ್ ಗಂಗಾಂಬಿಕೆ ಅವರೇ ಸಂಘಕ್ಕೆ ಪತ್ರ ಬರೆದು ಪಾಲಿಕೆ ಉತ್ತಮ ನೌಕರರಿಗೆ ಕೆಂಪೇಗೌಡ ಪ್ರಶಸ್ತಿ ಬದಲು ಪರ್ಯಾಯ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಮೇಯರ್ ಅವರ ಮನವಿ ಮೇರೆಗೆ ಕೆಂಪೇಗೌಡ ಪ್ರಶಸ್ತಿಯನ್ನು ಬೆಂಗಳೂರು ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಎಂದು ಬದಲಾಯಿಸಲಾಗುವುದು ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ಸ್ಪಷ್ಟನೆ ನೀಡಿದ್ದರು.
ಅಮೃತ್ರಾಜ್ ಅವರ ಈ ನಿರ್ಧಾರಕ್ಕೂ ವಿರೋಧ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಕೆಂಪೇಗೌಡರ ಹೆಸರಿನಲ್ಲಿ ನೌಕರರಿಗೆ ಪ್ರಶಸ್ತಿ ನೀಡಬಾರದು ಎಂದು ಪದ್ಮನಾಭನಗರ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಸಂಘದವರು ಪಾಲಿಕೆ ನೌಕರರಿಗೆ ಉತ್ತಮ ನೌಕರರೆಂದು ಪ್ರಶಸ್ತಿ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಸೂಕ್ತವಲ್ಲ ಎಂದು ಸಮಿತಿ ಅಧ್ಯಕ್ಷ ಹಾಗೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಸಂಘದವರು ಹೊಸ ಇತಿಹಾಸ ಪ್ರಾರಂಭಿಸುವ ಬದಲು ಕೆಂಪೇಗೌಡರ ಇತಿಹಾಸ ಉಳಿಸಲು ಮುಂದಾಗಬೇಕು. ಬಿಬಿಎಂಪಿಯಲ್ಲಿ ಪ್ರತಿ ವರ್ಷ ಆಚರಿಸುವ ಕೆಂಪೇಗೌಡರ ದಿನಾಚರಣೆ ಸಂದರ್ಭದಲ್ಲಿ ನಾಡಿನ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡುತ್ತಿರುವುದು ಸೂಕ್ತ.
ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲಿ ಬಿಬಿಎಂಪಿಯ ಸಿಬ್ಬಂದಿಗಳಿಗೆ ಉತ್ತಮ ನೌಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹೀಗಾಗಿ ಸಂಘದವರು ಇದೀಗ ಉತ್ತಮ ನೌಕರರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಮುಂದಾಗಿರುವುದು ಸೂಕ್ತವಲ್ಲ.
ತಕ್ಷಣ ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲಿ ವಿತರಿಸಲಾಗುವ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸಲು ಸಹಕರಿಸಬೇಕೆಂದು ಬಸವರಾಜ್ ಮನವಿ ಮಾಡಿಕೊಂಡಿದ್ದಾರೆ.