ಆರೋಗ್ಯವಂತ ಸಮಾಜ ಕಟ್ಟಿದಾಗ ಮಾತ್ರ ದೇವರನ್ನು ಕಾಣಬಹುದು-ಶ್ರೀ ಸಿದ್ಧಲಿಂಗಸ್ವಾಮೀಜಿ

ಬೆಂಗಳೂರು, ಮೇ 10- ದ್ವೇಷ, ಅಸೂಯೆ, ಕೀಳರಿಮೆ, ಬಡವರನ್ನು ಕೀಳಾಗಿ ನೋಡುವ ಭಾವನೆ ಬಿಟ್ಟು, ಇತರರೂ ಸಹ ನಮ್ಮಂತೆ ಕಾಣುವ ಪ್ರವೃತ್ತಿ ಬೆಳೆಸಿಕೊಂಡು, ಬಸವಣ್ಣನವರ ಆದರ್ಶಗಳನ್ನು ಪಾಲಿಸಿದಾಗ ನೆಮ್ಮದಿಯ ಸಮಾಜ ಕಾಣಬಹುದು ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಹೇಳಿದರು.

ತಾವರೆಕೆರೆ ಹೋಬಳಿಯ ಪುರದಪಾಳ್ಯದಲ್ಲಿ ಶ್ರೀ ಬಸವೇಶ್ವರಸ್ವಾಮಿ ಸೇವಾ ಟ್ರಸ್ಟ್(ರಿ) ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರಸ್ವಾಮಿ ಪ್ರತಿಷ್ಠಾಪನೆ ದೇವಾಲಯ ಜೀರ್ಣೋದ್ಧಾರ, ನಂದಿಗೋಶಾಲಾ ಪ್ರಾರಂಭೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವುದೇ ಧರ್ಮ, ಪ್ರೀತಿ, ಸಹಾಯಹಸ್ತ, ಮಾನವೀಯ ಮೌಲ್ಯ, ಎಲ್ಲರನ್ನು ಸನ್ಮಾರ್ಗದ ದಾರಿಯಲ್ಲಿ ಹೋಗುವಂತೆ ಮಾಡುವ ವ್ಯಕ್ತಿಯಲ್ಲಿಯೂ ಧರ್ಮ ಕಾಣಬಹುದು ಎಂದರು.

ವಿಶ್ವದೆಲ್ಲೆಡೆ ಬಡವ-ಶ್ರೀಮಂತರ ನಡುವೆ ಕಂದಕ ಜಾಸ್ತಿಯಾಗುತ್ತಿದೆ. ಹಣ, ಅಂತಸ್ತು ಸಿರಿವಂತಿಕೆ ಜಾಸ್ತಿಯಾದಂತೆಲ್ಲ, ನೆಮ್ಮದಿ, ಆರೋಗ್ಯ ಸಿಗುತ್ತಿಲ್ಲ.

ಮನೋರೋಗ ಜಾಸ್ತಿಯಾಗುತ್ತಿದೆ. ಬೇರೋಬ್ಬರನ್ನು ತುಳಿದು ಉಳ್ಳವರಾಗುವ ಪ್ರವೃತ್ತಿ ಬಿಟ್ಟು ಆರೋಗ್ಯವಂತ ಸಮಾಜ ಕಟ್ಟಿದಾಗ ಮಾತ್ರ ದೇವರನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಕೂಂಚಗಲ್ ಬಂಡೇಮಠದ ಶ್ರೀ ಬಸವಲಿಂಗಸ್ವಾಮೀಜಿ ಮಾತನಾಡಿ, ನಗರೀಕರಣ ಪ್ರಭಾವದಿಂದ ದೇಶೀ ಸಂಸ್ಕೃತಿ ಕಣ್ಮರೆಯಾಗುತ್ತಿದೆ.ಜಲಮೂಲ, ಪರಿಸರ, ಅರಣ್ಯ ಸಂಪತ್ತುಗಳನ್ನು ಮಾನವರು ನಾಶ ಮಾಡುತ್ತಿದ್ದು, ಮುಂದೊಂದು ಕ್ಷಾಮ ಬರುವ ಮುನ್ನ ಇವನ್ನೆಲ್ಲಾ ಉಳಿಸಬೇಕು ಎಂದು ತಿಳಿ ಹೇಳಿದರು.

ಶಾಸಕ ವಿ.ಸೋಮಣ್ಣ ಅವರ ಪತ್ನಿ ಶೈಲಜ ಕಾರ್ಯಕ್ರಮ ಉದ್ಘಾಟಿಸಿದರು, ಮಹಾಂತೇಶ್ವರ ಗದ್ದಿಗೆ ಮಠದ ಶ್ರೀಮಹಂತಸ್ವಾಮೀಜಿ, ಬಸವಣ್ಣ ದೇವರಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ಜಗಣ್ಣಯ್ಯಮಠದ ಶ್ರೀ ಚನ್ನಬಸವಸ್ವಾಮೀಜಿ, ಉದ್ಯಮಿ ಎನ್.ಎಂ.ಶಿವಕುಮಾರ್, ಚಿಂತಕ ಎಂ.ಜಿ.ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಪಿ.ಎಂ.ರುದ್ರೇಶ್, ನಿವೃತ್ತ ತಹಸೀಲ್ದಾರ್ ಶಿವಣ್ಣ, ಶಿವಶಂಕರಯ್ಯ, ಪಿ.ಎಲ್.ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ