ಅಯೋಧ್ಯೆ ಪ್ರಕರಣ ಸಂಧಾನ: ವಿಚಾರಣೆಯನ್ನು ಆಗಸ್ಟ್ 15ಕ್ಕೆ ಮುಂದೂಡಿದ ಸುಪ್ರೀಂ

ನವ ದೆಹಲಿ : ‘ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂ ವಿವಾದ’ ಪ್ರಕರಣವನ್ನು ಸಂಧಾನ ಸಭೆ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದ ಸುಪ್ರೀಂ ಕೋರ್ಟ್ ಈ ಕುರಿತ ವಿಚಾರಣೆಯನ್ನು ಆಗಸ್ಟ್​ 15ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎಫ್​.ಎಂ. ಖಲೀಫುಲ್ಲಾ ನೇತೃತ್ವದ ಅಯೋಧ್ಯಾ ಸಂಧಾನ ಸಭೆಯ ತ್ರಿಸದಸ್ಯ ಸಮಿತಿ  ಪ್ರಕರಣದ ಸೌಹಾರ್ದಯುತ ಮತ್ತು ಶಾಶ್ವತ ಪರಿಹಾರಕ್ಕೆ ಸಮಯಾವಕಾಶ ಕೋರಿದ ಪರಿಣಾಮ ಪ್ರಕರಣವನ್ನು ಮುಂದೂಡಲಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಎರಡು ತಿಂಗಳ ನಂತರ ಇಂದು ಪ್ರಕರಣ ವಿಚಾರಣೆಗೆ ಬಂದಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಮುಸ್ಲಿಂ ಪಾರ್ಟಿಗಳು ಈ ಪ್ರಕರಣದ ಇತ್ಯರ್ಥಕ್ಕೆ ಯಾವುದೇ ಕ್ರಮ ತೆಗೆದುಕೊಂಡರು ಅದಕ್ಕೆ ತಾವು ಬದ್ಧ ಎಂದು ಸಮ್ಮತಿ ಸೂಚಿಸಿದ್ದರು. ಆದರೆ ನಿರ್ಮೋಹಿ ಅಖಾರ ಸಂಧಾನ ಸಭೆಯ ಬಗ್ಗೆ ತಕಾರರು ತೆಗೆದಿದ್ದು ನ್ಯಾಯಾಲಯಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಕೊನೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎಫ್​.ಎಂ. ಖಲೀಫುಲ್ಲಾ ನೇತೃತ್ವದ ಅಯೋಧ್ಯಾ ಸಂಧಾನ ಸಭೆಯ ತ್ರಿಸದಸ್ಯ ಸಮಿತಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ಕೋರ್ಟ್ ಅವರ ಕೋರಿಕೆಯಂತೆ ಮತ್ತಷ್ಟು ಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ಅಯೋಧ್ಯ ಸಂಧಾನ ಸಭೆ : ಮಾರ್ಚ್ 8 ರಂದು ಅಯೋಧ್ಯೆ ಪ್ರಕರಣವನ್ನು ವಿಚಾರಣೆಗೊಳಪಡಿಸಿದ್ದ ಸುಪ್ರೀಮ್ ಕೋರ್ಟ್ ಎರಡು ಕೋಮುಗಳ ನಡುವಿನ ವ್ಯಾಜ್ಯವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಸೂಚಿಸಿತ್ತು. ಅಲ್ಲದೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್​.ಎಂ. ಇಬ್ರಾಹಿಂ ಖಲೀಫುಲ್ಲಾ, ಧಾರ್ಮಿಕ ಮುಖಂಡ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಗೆ ಫೈಜಾಬಾದ್​ನಲ್ಲಿ ಎಲ್ಲಾ ಅರ್ಜಿದಾರರನ್ನು ಭೇಟಿಯಾಗಿ ಮಧ್ಯಸ್ಥಿಕೆ ಸಾಧ್ಯಾಸಾಧ್ಯತೆಗಳ ಕುರಿತು 8 ವಾರಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿತ್ತು.

ಈ ತ್ರಿಸದಸ್ಯ ಸಭೆ ನೀಡಿದ ವಿಸ್ಕೃತ ವರದಿಯ ಅಧಾರದಲ್ಲಿ ಇಂದು ವಿಚಾರಣೆ ಕೈಗೊಳ್ಳಲಾಗಿತ್ತು. ಆದರೂ ಈ ಸಮಿತಿ  ಪ್ರಕರಣದ ಸೌಹಾರ್ದಯುತ ಮತ್ತು ಶಾಶ್ವತ ಪರಿಹಾರಕ್ಕೆ ಮತ್ತಷ್ಟು ಸಮಯಾವಕಾಶ ಕೋರಿದ ಪರಿಣಾಮ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ