ಬೆಂಗಳೂರು, ಮೇ 10- ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ. ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೆ ಗೋಕಾಕ್ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಬಂಡಾಯ ನಾಯಕ ರಮೇಶ್ ಜಾರಕಿ ಹೊಳಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿಂದು ಯಮಕನಮರಡಿ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಮುಖಂಡರಾದ ಬಿ.ಬಿ.ಅಂಜಿ, ರವಿಅಂಜಿ ಹಾಗೂ ಇತರ ಮುಖಂಡರ ಜೊತೆ ರಹಸ್ಯ ಸಭೆ ನಡೆಸಿದ ರಮೇಶ್ ಜಾರಕಿ ಹೊಳಿ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿದಂತೆ ಮಾತನಾಡಿದ್ದಾರೆ.
ತಮ್ಮ ಜೊತೆ ಕಾಂಗ್ರೆಸ್ನ ನಾಲ್ಕು ಮಂದಿ ಶಾಸಕರು ರಾಜೀನಾಮೆ ನೀಡುತ್ತಾರೆ, ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ, ರಾಜೀನಾಮೆ ಬಳಿಕ ನಡೆಯುವ ಉಪಚುನಾವಣೆಗೆ ಗೋಕಾಕ್ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ, ಮುಂದೆ ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಸತೀಶ್ ಜಾರಕಿ ಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹೇಳಿ ಸವಾಲು ಎಸೆದಿದ್ದಾರೆ.
ಕಾಂಗ್ರೆಸ್ನ ಅತೃಪ್ತ ನಾಯಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಮಸ್ಕಿ ಕ್ಷೇತ್ರದ ಪ್ರತಾಪ್ಗೌಡ ಪಾಟೀಲ್, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಜೊತೆ ಕುಮಾರಸ್ವಾಮಿ ಖುದ್ದಾಗಿ ಮಾತನಾಡಿದ್ದು, ರಮೇಶ್ ಜಾರಕಿ ಹೊಳಿ ಅವರ ಜೊತೆ ಸಂಸದ ಬಿ.ವಿ.ನಾಯಕ್ ಮೂಲಕ ಸಂಧಾನ ನಡೆಸಿದ್ದರು.ಒಂದು ಹಂತದಲ್ಲಿ ಸಂಧಾನ ಕೈಗೂಡಿದೆ ಎಂದು ಭಾವಿಸಲಾಗಿತ್ತು. ಬೆಂಗಳೂರಿನಿಂದ ಬೆಳಗಾವಿಗೆ ತೆರಳಿ ರಮೇಶ್ ಜಾರಕಿ ಹೊಳಿ, ಲೋಕಸಭೆ ಚುನಾವಣಾ ಫಲಿತಾಂಶದವರೆಗೂ ತಾವು ರಾಜೀನಾಮೆ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದರು.
ಅದಕ್ಕೆ ಪೂರಕವೆಂಬಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿ ಹೊಳಿ ಅವರು ಈವರೆಗೂ ರಮೇಶ್ ಜಾರಕಿ ಹೊಳಿ ಜೊತೆ ಸಂಧಾನ ಇಲ್ಲ ಎನ್ನುತ್ತಿದ್ದವರು.ನಿನ್ನೆ ಇದ್ದಕ್ಕಿದ್ದಂತೆ ರಾಗ ಬದಲಾವಣೆ ಮಾಡಿ ಹೈಕಮಾಂಡ್ ಬೇಕಾದರೆ ಸಂಧಾನ ಮಾಡಲಿ ಎಂದು ಹೇಳಿಕೆ ನೀಡಿದ್ದರು.
ಹೇಳಿಕೆ-ಪ್ರತಿಹೇಳಿಕೆಗಳ ನಡುವೆ ಇಂದು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ರಮೇಶ್ ಜಾರಕಿ ಹೊಳಿ ತಮ್ಮಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ತಮ್ಮ ಜೊತೆ ನಾಲ್ವರು ಶಾಸಕರು ರಾಜೀನಾಮೆ ನೀಡುತ್ತಾರೆ. ನಾವು ಈಗಾಗಲೇ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡಲು ಕೆಲಸ ಆರಂಭಿಸಿದ್ದೇವೆ. ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ರಮೇಶ್ ಜಾರಕಿ ಹೊಳಿ ಸಭೆಯಲ್ಲಿ ಬೆಂಬಲಿಗರಿಗೆ ಆತ್ಮವಿಶ್ವಾಸ ತುಂಬುವಂತೆ ಮಾತನಾಡಿದ್ದಾರೆ.
ರಮೇಶ್ ಜಾರಕಿ ಹೊಳಿ ಸಭೆ ನಡೆಸಿದ ಹೊಟೇಲ್ನಲ್ಲೇ ಬಿಜೆಪಿಯ ಶಾಸಕರೂ ಆದ ಬಾಲಚಂದ್ರ ಜಾರಕಿ ಹೊಳಿ ತಂಗಿದ್ದರು. ಆದರೆ ಅಪ್ಪಿತಪ್ಪಿಯೂ ಇಬ್ಬರು ಎದುರುಬದರಾಗಿ ಮಾತನಾಡಲಿಲ್ಲ. ಬಾಲಚಂದ್ರ ಜಾರಕಿ ಹೊಳಿ ಅವರು ರಮೇಶ್ ಜಾರಕಿ ಹೊಳಿ ಪುತ್ರ ಅಮರ್ನಾಥ್ ಜೊತೆ ಹೊಟೇಲ್ನಿಂದ ಹೊರ ಹೋಗಿದ್ದು ಆಶ್ಚರ್ಯ ಮೂಡಿಸಿತು.