ಚಿಂಚೋಳಿ, ಮೇ 9- ನಾಲ್ಕಾರು ಪಕ್ಷಗಳನ್ನು ಬಿಟ್ಟು ಬಂದಿರುವ ಸುಭಾಷ್ ರಾಥೋಡ್ಗೆ ನನ್ನ ಹಾಗೂ ಪುತ್ರನ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಸುಭಾಷ್ ರಾಥೋಡ್ ಈಗ ಟಿಕೆಟ್ಗಾಗಿ ಖರ್ಗೆ ಕಾಲಿಗೆ ಬಿದ್ದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಹೊರಗಿನ ಅಭ್ಯರ್ಥಿಯನ್ನು ಚಿಂಚೋಳಿ ಕ್ಷೇತ್ರದ ಜನ ತಿರಸ್ಕರಿಸಲಿದ್ದಾರೆ. ಯಾರು ಬಂದು ಸುಭಾಷ್ ರಾಥೋಡ್ ಪರ ಕೆಲಸ ಮಾಡಿದರೂ ಏನೂ ಪ್ರಯೋಜನವಾಗಲಾರದು.ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಈಗಿನ ಚುನಾವಣೆಯಲ್ಲಿ ಅವರಿಗೆ ಸೋಲು ಖಚಿತ. ಸೋತ ನಂತರ ಬೇರೊಂದು ಪಕ್ಷಕ್ಕೆ ಹೋಗುತ್ತಾರೆ ಎಂದು ರಾಥೋಡ್ ವಿರುದ್ಧ ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂಚೋಳಿ ಕ್ಷೇತ್ರದಲ್ಲಿ ಅವರ ಕೆಲಸ ಮಾಡುತ್ತಾರೆ. ನಾನು ನನ್ನ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯನವರ ಮಾತುಗಳಿಗೆ ನಾನು ಸರಿಯಾದ ಉತ್ತರ ಕೊಡುತ್ತೇನೆ ಎಂದು ವರದಿಗಾರರ ಪ್ರಶ್ನೆಯೊಂದಕ್ಕೆ ಜಾಧವ್ ಉತ್ತರಿಸಿದರು.
ಸಿದ್ದರಾಮಯ್ಯ ಅವರ ಬಗ್ಗೆ ನನ್ನ ಕಡೆಯಿಂದ ಯಾವುದೇ ಆರೋಪಗಳಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.