ಭಾರಿ ಚರ್ಚೆಗೆ ಕಾರಣವಾದ ಶಾಸಕ ಶ್ರೀರಾಮುಲು ಹೇಳಿಕೆ

ಧಾರವಾಡ, ಮೇ 9-ಸಚಿವ ಸಿ.ಎಸ್.ಶಿವಳ್ಳಿ ಸಾವಿನ ಕುರಿತಂತೆ ಬಿಜೆಪಿ ನಾಯಕ ಶ್ರೀರಾಮುಲು ನೀಡಿದ ಹೇಳಿಕೆ ಕುಂದಗೋಳ ವಿಧಾನಸಭಾ ಉಪಚುನಾವಣಾ ಕಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.

ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ ಶ್ರೀರಾಮುಲು ವಿರುದ್ಧ ಚುನಾವಣಾ ಆಯೋಗ ಮತ್ತು ಪೊಲೀಸ್ ಠಾಣೆ ಎರಡು ಕಡೆಯೂ ದೂರು ನೀಡಿದ್ದು, ಉನ್ನತ ತನಿಖೆಗೆ ಆಗ್ರಹಿಸಿದೆ. ಅತ್ತ ಬಿಜೆಪಿ ನಾಯಕರು ಶ್ರೀರಾಮುಲು ಹೇಳಿಕೆಗೆ ಬೆಂಬಲವಾಗಿ ದನಿಗೂಡಿಸಿದ್ದು, ಸಮ್ಮಿಶ್ರ ಸರ್ಕಾರದ ಆರಂಭದಲ್ಲೇ ಶಿವಳ್ಳಿ ಅವರನ್ನು ಸಚಿವರನ್ನಾಗಿ ಮಾಡಿದ್ದರೆ ಅವರಿಗೆ ಸಮಾಧಾನವಾಗುತ್ತಿತ್ತು.ಇನ್ನಷ್ಟು ದಿನ ಬದುಕುತ್ತಿದ್ದರು ಎಂದು ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಮತ್ತಿತರರು ಹೇಳಿಕೆ ನೀಡಿದ್ದಾರೆ.

ಸಿ.ಎಸ್.ಶಿವಳ್ಳಿ ಉತ್ತಮ ವ್ಯಕ್ತಿ. ಅವರ ಸಾವಿಗೆ ಕಾಂಗ್ರೆಸ್ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರ ಕಾರಣ ಎಂದು ನಿನ್ನೆ ಬಳ್ಳಾರಿಯ ಬಿಜೆಪಿ ನಾಯಕ ಶ್ರೀರಾಮುಲು ಹೇಳಿಕೆ ನೀಡಿದ್ದರು. ಉಪಚುನಾವಣೆ ನಡೆಯುತ್ತಿರುವುದರಿಂದ ಈ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ಕುಂದಗೋಳ ಉಪಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಅವರು, ರಾತ್ರೋರಾತ್ರಿ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಅವರ ಜೊತೆ ಚರ್ಚೆ ಮಾಡಿದ್ದು, ದೂರು ದಾಖಲಿಸಲು ಸೂಚಿಸಿದ್ದಾರೆ.

ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಶ್ರೀರಾಮುಲು ಮಾಜಿ ಸಚಿವರು, ಸಂಸದರಾಗಿದ್ದರು, ಹಾಲಿ ಶಾಸಕರಾಗಿದ್ದಾರೆ.

ಜವಾಬ್ದಾರಿಯುತ ವ್ಯಕ್ತಿಯಾಗಿರುವ ಅವರು, ನೀಡುವ ಹೇಳಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ. ಸಿ.ಎಸ್.ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್ ಅಥವಾ ಸಮ್ಮಿಶ್ರ ಸರ್ಕಾರ ಕಾರಣ ಎಂಬ ಹೇಳಿಕೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮಗೆ ಸತ್ಯ ಗೊತ್ತಾಗಬೇಕು. ಶಿವಳ್ಳಿ ಅವರಿಗೆ ಕಿರುಕುಳ ಕೊಟ್ಟವರ್ಯಾರು, ಮುಖ್ಯಮಂತ್ರಿ ಅವರು ಕೊಟ್ರೆ, ಕಾಂಗ್ರೆಸ್ ಕಾರ್ಯಕರ್ತರು ಅಥವಾ ನಾಯಕರು ಕೊಟ್ರೆ, ಜಿಲ್ಲಾ ಉಸ್ತುವಾರಿ ಸಚಿವರಾದ ದೇಶಪಾಂಡೆ ಅವರು ಕೊಟ್ರೆ ಅಥವಾ ನಾನು ಕೊಟ್ಟೆನೇ ಎಂಬ ವಿಷಯದ ತನಿಖೆಯಾಗಬೇಕು. ಶಿವಳ್ಳಿ ಸಾವಿಗೆ ಕಿರುಕುಳವೇ ಕಾರಣ ಎಂಬುದು ಶ್ರೀರಾಮುಲು ಅವರಿಗೆ ಗೊತ್ತಿದ್ದರೆ, ಆ ಬಗ್ಗೆ ಅವರು ಮೊದಲೇ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ, ಇಂತಹ ವಿಷಯಗಳನ್ನು ಮುಚ್ಚಿಡುವುದು ಕೂಡ ಅಪರಾಧ. ಹೀಗಾಗಿ ಈ ಹೇಳಿಕೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು.

ಸಂಸದ ವಿ.ಎಸ್.ಉಗ್ರಪ್ಪ ಅವರು ಮಧ್ಯಾಹ್ನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತಾರೆ, ಜೊತೆಯಲ್ಲಿ ಪೊಲೀಸ್ ಠಾಣೆಗೂ ದೂರು ನೀಡಲಾಗುತ್ತದೆ.

ಕೇಸು ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದೇವೆ. ಉನ್ನತ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿಯವರಿಗೂ ಮನವಿ ಮಾಡಿರುವುದಾಗಿ ಹೇಳಿದರು.

ಶ್ರೀರಾಮುಲು ಅಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರ ಹೇಳಿಕೆ ಕ್ಷೇತ್ರದ ಜನರಲ್ಲಿ ಅನುಮಾನಗಳನ್ನು ಹುಟ್ಟಿ ಹಾಕಿದೆ. ಅದು ಬಗೆಹರಿಯಬೇಕು. ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಇದೇ ಶ್ರೀರಾಮುಲು ಅವರು ಆಗಲೂ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವಿರುದ್ಧ ಕೊಲೆ ಯತ್ನದ ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸಹಿಸಿಕೊಂಡಿರಬಹುದು. ಆದರೆ ನಾವು ಸಹಿಸಿಕೊಳ್ಳುವುದಿಲ್ಲ. ನಮಗೆ ಸತ್ಯ ಗೊತ್ತಾಗಬೇಕು.

ಶಿವಳ್ಳಿ ಅವರ ಕೊಲೆಯಾಗಿದ್ದೇ ಆದರೆ ಆ ಸಂಚಿನ ಹಿಂದೆ ಯಾರಿದ್ದಾರೆ ಎಂಬ ಸತ್ಯ ತಿಳಿಯಬೇಕು. ಹಾಗಾಗಿ ತನಿಖೆ ಅನಿವಾರ್ಯ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.

ಕಾಂಗ್ರೆಸ್ ಶ್ರೀರಾಮುಲು ವಿರುದ್ಧ ದೂರು ನೀಡಲು ಮುಂದಾಗುತ್ತಿದ್ದಂತೆ ಬಿಜೆಪಿಯವರು ಹೇಳಿಕೆಗಳನ್ನು ನೀಡಲಾರಂಭಿಸಿದರು. ಶ್ರೀರಾಮುಲು ಆರೋಪಕ್ಕೆ ಪೂರಕವಾಗಿ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಮಾತನಾಡಿ, ವಿಳಂಬವಾಗಿ ಸಚಿವ ಸ್ಥಾನ ಸಿಕ್ಕಿದ್ದರಿಂದ ಸಿ.ಎಸ್.ಶಿವಳ್ಳಿ ಮನನೊಂದಿದ್ದರು ಎಂದಿದ್ದಾರೆ. ಕುಂದಗೋಳ ಉಪಚುನಾವಣಾ ಕಣದಲ್ಲಿ ಈಗ ಸಾವಿನ ರಾಜಕೀಯವೇ ಮೇಳೈಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ