ಬೆಂಗಳೂರು, ಮೇ 9- ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ. ಗೊಂದಲ ವಿದ್ದರೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಲಾಗುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಕೆಲಸವನ್ನು ಮಾಡುವುದಷ್ಟೇ ನನ್ನ ಕೆಲಸ ಎಂದರು.
ಉಪಮುಖ್ಯಮಂತ್ರಿಯಾಗುವ ಯೋಗವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಪವೂ ಇಲ್ಲ. ಮುಖ್ಯವೂ ಇಲ್ಲ. ಯೋಗ ಬಂದಾಗ ಯಾರೂ ತಡೆಯಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಹಾಸನ ಜಿಲ್ಲಾಧಿಕಾರಿ ಹಾಗೂ ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಂತೆ ಯಾವ ಡಿಶುಂ ಡಿಶುಂ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಇಲ್ಲ. ಬಡವರ, ಜನರ ಕೆಲಸವಾಗಬೇಕೆಂಬುದಷ್ಟೇ ನಮ್ಮ ಕಾಳಜಿ. ಬರಗಾಲ ಇರುವುದರಿಂದ ಬರಪರಿಹಾರ ಕಾಮಗಾರಿ, ಕುಡಿಯುವ ನೀರಿನ ವಿಚಾರ ಪ್ರಸ್ತಾಪಿಸಲಾಗಿತ್ತು ಎಂದರು.
ಮೇ 15ರಿಂದ ಆಲೂಗಡ್ಡೆ ಬಿತ್ತನೆ ಶುರುವಾಗುತ್ತಿದೆ.ಆಲೂಗಡ್ಡೆ ಬಿತ್ತನೆ ಬೀಜ, ಔಷಧಿ, ಗೊಬ್ಬರಕ್ಕೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಲಾಠಿ ಚಾರ್ಜ್ ಆಗಿತ್ತು. ಆ ರೀತಿ ಮತ್ತೆ ಆಗುವುದು ಬೇಡ ಎಂಬುದಷ್ಟೇ ನಮ್ಮ ಕಾಳಜಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10 ಕೋಟಿ ಹಣವಿದೆ. ಕುಡಿಯುವ ನೀರಿಗೆ 5 ಕೋಟಿ ಹಣ ಒದಗಿಸಲಾಗಿದೆ. ಆದರೂ 15 ದಿನ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕರು ತಿಳಿಸಿದಾಗ ಆ ವಿಚಾರ ಕುರಿತು ಪ್ರಸ್ತಾಪಿಸಲಾಗಿದೆಯಷ್ಟೇ ಎಂದು ಹೇಳಿದರು.
ತಾವು ಕಾನೂನು ಹೊರತುಪಡಿಸಿ ಕೆಲಸ ಮಾಡಿ ಎಂದು ಯಾರಿಗೂ ಹೇಳಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳೇ ಸಭೆ ನಡೆಸಿ ಕ್ರಮ ಕೈಗೊಂಡರೂ ಅಭ್ಯಂತರವಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶಾಂತ ರೀತಿಯಲ್ಲಿ ಚುನಾವಣೆ ನಡೆದಿದೆ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲೆಡೆ ದಾಳಿ ನಡೆಸಿದರು. ನಾವು ಬೇಡ ಎನ್ನಲಿಲ್ಲ ಎಂದು ಹೇಳಿದರು.
ತಾವು ಪೀಸ್ವಕ್ರ್ಸ್ ಕಾಮಗಾರಿ ನೀಡಿಲ್ಲ. ಸಿಂಗಲ್ ಟೆಂಡರ್ ಇರುವುದರಿಂದ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಗುಣಮಟ್ಟದಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ರೇವಣ್ಣ ತಿಳಿಸಿದರು.