ಈ ಬಾರಿ ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ

ಬೆಂಗಳೂರು, ಮೇ 9- ರಾಜ್ಯದಲ್ಲಿ ಈ ಬಾರಿಯೂ ಬರಗಾಲ ಆವರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಪರಿಣಾಮ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳಲಿದೆ.ಬಹುತೇಕ ಎಲ್ಲಾ ಜಲಾಶಯಗಳು ಖಾಲಿಯಾಗುವ ಹಂತ ತಲುಪಿವೆ.

ಮೇ ತಿಂಗಳು ಮುಗಿಯುತ್ತಾ ಬಂದರೂ ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಪರಿಣಾಮ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ತೀರಪ್ರದೇಶ ಸೇರಿದಂತೆ ಬಹುತೇಕ ಎಲ್ಲಾ ಕಡೆ ಬರದ ಛಾಯೆ ಆವರಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಶೇ.10ರಷ್ಟು ಕುಸಿದಿದೆ.2014-15ರಲ್ಲಿ ಆಗಸ್ಟ್ ತಿಂಗಳ ಅಂತ್ಯಕ್ಕೆ ಸುಮಾರು ಶೇ.35ರಷ್ಟು ಮಳೆಯಾಗಿತ್ತು.ಆದರೆ, ಈ ಬಾರಿ ಈವರೆಗೂ ಶೇ.25ರಷ್ಟು ಮಳೆಯಾಗಿರುವುದು ಬರಗಾಲದ ಮುನ್ಸೂಚನೆ ಎನ್ನುತ್ತಾರೆ ಹವಮಾನ ಇಲಾಖೆ ಅಧಿಕಾರಿಗಳು.

ಕಡೆಪಕ್ಷ ಕರಾವಳಿ ತೀರಪ್ರದೇಶಗಳಾದ ದಕ್ಷಿಣಕನ್ನಡ, ಉಡುಪಿ, ಕಾರವಾರ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಜಿಲ್ಲೆಗಳಲ್ಲೂ ನಿರೀಕ್ಷಿತ ಮಟ್ಟದಲಿ ಮಳೆಯಾಗಿಲ್ಲ.

ಮಧ್ಯಕರ್ನಾಟಕ, ದಕ್ಷಿಣ ಕರ್ನಾಟಕ, , ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಬೆಳೆದುನಿಂತ ಬೆಳೆಗಳು ಒಣಗುವ ಹಂತ ತಲುಪಿವೆ. ಪ್ರಮುಖವಾಗಿ ಮೆಕ್ಕೇಜೋಳ, ಶೇಂಗಾ, ಬಾಳೆ, ತೆಂಗು, ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿಲ್ಲದೆ ಸೊರಗಿವೆ.

ಕುಡಿಯುವ ನೀರಿಗೂ ಹಾಹಾಕಾರ:
ಮಲೆನಾಡಿನ ತವರೂರು ಎನಿಸಿದ ಶಿವಮೊಗ್ಗ ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ತಾತ್ವಾರ ಎದುರಾಗಿದೆ.ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ನಗರಗಳಲ್ಲಿ ಈಗಲೂ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ.

ಆಗುಂಬೆಯಲ್ಲೇ ನೀರಿನ ಸಂಪನ್ಮೂಲ ಬರಿದಾಗಿರುವುದರಿಂದ ಜನರು ಟ್ರ್ಯಾಂಕರ್‍ಗಳಲ್ಲಿ ನೀರು ಹಿಡಿಯುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.

ಇನ್ನು ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಪರಿಸ್ಥಿತಿಯಂತು ವಿಕೋಪಕ್ಕೆ ತಿರುಗಿದೆ. ಕಳೆದ ವರ್ಷವೂ ಬರಗಾಲದಿಂದ ತತ್ತರಿಸಿದ ಇಲ್ಲಿನ ಜನತೆಗೆ ಗಾಯದ ಮೇಲೆ ಬರೆ ಎಂಬಂತೆ ಪುನಃ ಬರಗಾಲ ಬಂದಿರುವುದರಿಂದ ಜೀವನ ದುಸ್ತರವಾಗಿದೆ. ಪರಿಣಾಮ ಜನ ಗುಳೆ ಹೋಗುತ್ತಿದ್ದಾರೆ.

ಪ್ರಮುಖ ಜಲಾಶಯಗಳಲ್ಲಿ ನೀರಿಲ್ಲದ ಪರಿಣಾಮ ವಿದ್ಯುತ್ ಉತ್ಪಾದನೆಯೂ ಕುಂಠಿತಗೊಂಡಿದೆ.

ಕೃಷಿ ಚಟುವಟಿಕೆಗಳಿಗೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಬಳಸಬಾರದು ಎಂದು ಸರ್ಕಾರ ಸೂಚನೆ ಕೊಟ್ಟಿದೆ. ಹೀಗಾಗಿ ಜನರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಜಲಾಶಯಗಳು ಖಾಲಿ ಖಾಲಿ:
ಇನ್ನು ನಾಡಿನ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪಾ, ವರಾಹಿ, ಹಾರಂಗಿ, ಹೇಮಾವತಿ, ಕೆಆರ್‍ಎಸ್, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಾಮಥ್ರ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಅದರಲ್ಲೂ ಬೆಂಗಳೂರು ಮಹಾನಗರಕ್ಕೆ ನೀರುಣಿಸುವ ಕೆಆರ್‍ಎಸ್ ಜಲಾಶಯದಲ್ಲಿ ಕೇವಲ 93 ಅಡಿ ನೀರು ಸಂಗ್ರಹವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುದೊಂದು ದಿನ ಹನಿ ಹನಿ ನಿರೀಗೂ ಪರದಾಡುವ ಪರಿಸ್ಥಿತಿ ದೂರವಿಲ್ಲ.

ಕಾವೇರಿ ನದಿ ತೀರಾದ ಜಲಾಶಯಗಳಾದ ಕೆಆರ್‍ಎಸ್, ಕಬಿನಿ, ಹೇಮಾವತಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

ನಾಡಿನ ಪ್ರಮುಖ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯದ ನೀರು ತಳ ಸೇರಿದೆ. ಒಟ್ಟು 1819 ಅಡಿ ಸಾಮಥ್ರ್ಯದ ಈ ಜಲಾಶಯದಲ್ಲಿ ಈವರೆಗೂ 1783 ಅಡಿ ನೀರು ಸಂಗ್ರಹವಾಗಿದೆ. 2000 ವರ್ಷದ ನಂತರ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವುದು ಕೇವಲ ಎರಡು ಬಾರಿ ಮಾತ್ರ.

ಒಂದು ವೇಳೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ವಿದ್ಯುತ್ ಉತ್ಪಾದನೆ ಬಿಕ್ಕಟ್ಟಿನಿಂದ ಪಾರಾಗಬಹುದು.ಅದೃಷ್ಟವಶಾತ್ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಊಹಿಸಲೂ ಸಾಧ್ಯವಾಗದಂತಹ ದುಸ್ಥಿತಿಗಳು ಬಂದರೂ ಅಚ್ಚರಿಯಿಲ್ಲ.

ವಿದ್ಯುತ್ ಕುಂಠಿತ:
ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ವಿದ್ಯುತ್ ಉತ್ಪಾದನೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ರಾಜ್ಯ ಸಕರ್‍ರ ರೈತರಿಗೆ 7ಗಂಟೆ ತ್ರಿಪೇಸ್ ವಿದ್ಯುತ್ ಒದಗಿಸುವುದಾಗಿ ಆಶ್ವಾಸನೆ ಕೊಟ್ಟಿದೆ. ಈ ಪ್ರಕಾರ ನುಡಿದಂತೆಯೂ ನಡೆದುಕೊಳ್ಳುತ್ತಿದೆ.

ಆದರೆ, ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆ ಕೈಕೊಟ್ಟರೆ 7ಗಂಟೆಯಿರಲಿ ಕಡೆ ಪಕ್ಷ ದಿನದ 24ಗಂಟೆಯಲ್ಲಿ 2ಗಂಟೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ.

ಹೊರ ರಾಜ್ಯಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಖರೀದಿಸಿ ಒದಗಿಸುವಂತಹ ಸ್ಥಿತಿಯಲ್ಲಿಯೂ ಸರ್ಕಾರವೂ ಇಲ್ಲ. ಇನ್ನು ಖಾಸಗಿ ಅವರಿಂದ ಖರೀದಿ ಮಾಡಿ ರೈತರಿಗೆ ವಿದ್ಯುತ್ ನೀಡುತ್ತೇನೆ ಎನ್ನುವುದು ಅಷ್ಟು ಸರಳವಾಗಿಲ್ಲ.

ಜಲಾಶಯಗಳು ಸಾಮಥ್ರ್ಯ ಪ್ರಸಕ್ತ ವರ್ಷ ಕಳೆದ ವರ್ಷ
ಲಿಂಗನಮುಕ್ಕಿ 1819.00 1764.95 1760.45
ಸೂಪ 1849.92 1759.49 1757.69
ವರಹಿ 1949.50 1890.26 1757.69
ಹಾರಂಗಿ 2859.00 2805.19 2805.96
ಹೇಮಾವತಿ 2922.00 2865.00 2863.10
ಕೆಆರ್‍ಎಸ್ 124.80 84.21 71.80
ಕಬಿನಿ 2284.00 2261.14 2254.99
ಭದ್ರ 2158.00 2105.70 2085.00
ತುಂಗಭದ್ರ 1633.00 1577.74 1576.76
ಘಟಪ್ರಭ 2175.00 2088.10 2091.41
ಮಲಪ್ರಭ 2079.50 2038.47 2039.87
ಆಲಮಟ್ಟಿ 1704.81 1673.41 668.36
ನಾರಾಯಣಪುರ 1615.00 1599.24 1598.04

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ