ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಡೆದ ಮಹತ್ವದ ಚರ್ಚೆ

ಬೆಂಗಳೂರು, ಮೇ 9-ಮೂವರು ಇಂಜಿನಿಯರ್‍ಗಳನ್ನು ಶಿಕ್ಷಿಸಬೇಕು ಮತ್ತು ಆರು ಮಂದಿ ಕೆಎಎಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕೆಂದು ಉಪಲೋಕಾಯುಕ್ತರು ಮಾಡಿದ್ದ ಶಿಫಾರಸ್ಸನ್ನು ಕೈಬಿಡುವ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿಂದು ಮಹತ್ವದ ಚರ್ಚೆ ನಡೆದಿದೆ.

ಲೋಕಸಭೆ ಚುನಾವಣೆ ಮುಗಿದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ಧಿ ವಿಷಯಗಳಿಗಿಂತಲೂ ಹೆಚ್ಚಾಗಿ ಕೆಲವು ಅಧಿಕಾರಿಗಳನ್ನು ರಕ್ಷಿಸುವುದು, ಇನ್ನು ಕೆಲವರನ್ನು ಶಿಕ್ಷಿಸುವ ವಿಷಯಗಳೇ ಹೆಚ್ಚಾಗಿ ಚರ್ಚೆಯಾಗಿವೆ. ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ.

ಭ್ರಷ್ಟಾಚಾರ ಮತ್ತು ಆಡಳಿತ ದುರುಪಯೋಗದ ಆರೋಪಕ್ಕಾಗಿ ಲೋಕಾಯುಕ್ತ ಕಾಯ್ದೆ 1984 ಕಲಂ 12(3)ರಡಿ ಕೆಎಎಸ್ ಅಧಿಕಾರಿಗಳಾದ ವಿಜಯಪುರದ ಹಿಂದಿನ ಉಪವಿಭಾಗಾಧಿಕಾರಿ ಡಾ.ಎಸ್.ಪಿ.ಬೂದೆಪ್ಪ, ಹಿಂದಿನ ತಹಶೀಲ್ದಾರ್ ಮಲ್ಲಿಕಾರ್ಜುನ್ ಎಸ್.ಹಲಕುರ್ಕಿ ಹಾಗೂ ಎ.ನವೀನ್ ಜೋಸೆಫ್, ಎಂ.ಕೆ.ಜಗದೀಶ್, ಸಿ.ಎಲ.ಶಿವಕುಮಾರ್, ಇ.ಬಾಲಕೃಷ್ಣ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಉಪ ಉಪಲೋಕಾಯುಕ್ತರು ರಾಜ್ಯಸರ್ಕಾರಕ್ಕೆ ಶಿಫಾರಸು ಮಾಡಿದರು. ಆದರೆ ಅಷ್ಟೂ ಮಂದಿ ಮೇಲಿನ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ತಿರಸ್ಕರಿಸಲು ರಾಜ್ಯಸರ್ಕಾರ ಮುಂದಾಗಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಭೀಮರಾಯನಗುಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಭಾಗ್ಯ ಜಲನಿಗಮದ ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ.ಶಿವಯೋಗಿ ಹಾಗೂ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಕ್ಷೆ ವಿಧಿಸುವಂತೆ ಉಪಲೋಕಾಯುಕ್ತರು ಮಾಡಿದ್ದ ಶಿಫಾರಸ್ಸನ್ನೂ ಸರ್ಕಾರ ಕೈಬಿಡಲು ಮುಂದಾಗಿದೆ.

ಇದಲ್ಲದೆ, ಸಹಾಯಕ ಇಂಜಿನಿಯರ್‍ಗಳಾದ ಆರ.ಸುರೇಶ್ ಅವರನ್ನು ಕಡ್ಡಾಯ ನಿವೃತ್ತಿಗೊಳಿಸುವಂತೆ ಉಪಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು.ಇದನ್ನು ಸರ್ಕಾರ ಕೈಬಿಡಲು ಮುಂದಾಗಿದೆ. ಶ್ರೀನಿವಾಸ್‍ರೆಡ್ಡಿ ವಿರುದ್ಧ ಕಠಿಣ ಶಿಕ್ಷೆಗೆ ಉಪಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು. ಅದರ ಬದಲಾಗಿ ಒಂದು ವರ್ಷದ ವಾರ್ಷಿಕ ಬಡ್ತಿಯನ್ನು ತಡೆಹಿಡಿದು ಶಿಕ್ಷೆಯನ್ನು ಕಡಿಮೆಗೊಳಿಸುವ ಕುರಿತು ಸಮಾಲೋಚನೆ ನಡೆದಿದೆ. ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಟಿ.ದಯಾನಂದಂ ಅವರ ವಿರುದ್ಧ ಉಪಲೋಕಾಯುಕ್ತರು ಮಾಡಿದ ಶಿಫಾರಸ್ಸನ್ನು ಕೈಬಿಡಲಾಗಿದೆ.

ಖಾನಾಪುರ ತಾಲೂಕಿನ ವೈದ್ಯಾಧಿಕಾರಿಯಾದ ಆರ.ವೈ.ನಾಯಕ್ ಅವರನ್ನು ಕಡ್ಡಾಯ ನಿವೃತ್ತಿ ಗೊಳಿಸಲು, ಹೆಗ್ಗಡದೇವನಕೋಟೆ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞ ಡಾ.ಬಿ.ರಾಜಶೇಖರ್ ಅವರನ್ನು ವಜಾ ಗೊಳಿಸುವ ಬದಲು ನಾಲ್ಕು ವೇತನ ಬಡ್ತಿ ಕಡಿತ ಮಾಡಿ ಸೇವೆಯಲ್ಲಿ ಮುಂದುವರೆಸುವ ಕುರಿತು ಚರ್ಚಿಸಲಾಗಿದೆ.

ಭಟ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕರಾಗಿದ್ದ ಚಂದ್ರಶೇಖರ್ ಅವರ ವಿರುದ್ಧ ದಂಡನೆ ವಿಧಿಸಲು ಉಪ ಲೋಕಾಯುಕ್ತರು ಮಾಡಿರುವ ಶಿಫಾರಸ್ಸನ್ನು ಕೈಬಿಡಲು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪನಿರ್ದೇಶಕ ಎಸ.ಸುರೇಶ ಅವರ ಪ್ರಕರಣದಲ್ಲಿ ಕೆಎಟಿ ನೀಡಿದ್ದ ತೀರ್ಪಿನಂತೆ ಸೇವೆಗೆ ಪುನರ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ಲೋಕಾಯುಕ್ತ ಟ್ರ್ಯಾಪ್‍ಗೆ ಸಿಲುಕಿದ್ದ ಉಡುಪಿಯ ಸಹಾಯಕ ಕೃಷಿ ನಿರ್ದೇಶಕ ಜಿ.ಬಸವರಾಜ್, ಸವಣೂರು ತಾಲೂಕು ತವರಮಲಹಳ್ಳಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಅಜಿತ್ ಕುಲಕರ್ಣಿ, ನೆಲಮಂಗಲ ತಾಲೂಕು ದಾಬಸ್‍ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಡಿ.ಆನಂದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಆನಂದ್ ಅವರುಗಳನ್ನು ಸೇವೆಯಿಂದ ವಜಾಗೊಳಿಸಲು ಚರ್ಚಿಸಲಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಬಿ.ಹೀರಾನಾಯಕ್ ಈಗ ನಿವೃತ್ತರಾಗಿದ್ದು, ಅವರನ್ನು ಕಂದಾಯ ಇಲಾಖೆ ಹುದ್ದೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುತ್ತಿದೆ. ನಿರ್ದೇಶಕರು, ಕಂದಾಯ ಗ್ರಾಮಗಳ ರಚನಾ ಕೋಶ ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿ ಎಂಬ ಮಹತ್ವದ ಹುದ್ದೆಗೆ ಹೀರಾನಾಯಕ್ ನೇಮಕವಾಗಲಿದ್ದಾರೆ. ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಎಂ.ಸಿ.ನಾಗರಾಜ ಅವರನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಳೆದ ಅಕ್ಟೋಬರï 8 ರಂದು ನೇಮಕ ಮಾಡಲಾಗಿದ್ದು, ಇಂದು ಘಟನೋತ್ತರ ಅನುಮತಿ ನೀಡಲಾಗಿದೆ.

ನಿವೃತ್ತ ಕೆಎಎಸ್ ಅಧಿಕಾರಿ ಸಿ.ಎಂ.ರಾಜೇಂದ್ರ ಅವರನ್ನು ಸಕ್ಕರೆ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಎಸ್.ಮುಖಬಿಲ ಸಾದತ್ ಅವರನ್ನು ಉಪಮುಖ್ಯಮಂತ್ರಿ ಅವರ ಸಚಿವಾಲಯಕ್ಕೆ ಗೃಹಮಂಡಳಿಯ ನಿವೃತ್ತ ದಫೇದಾರ್ ಜಿ.ರಾಮಪ್ಪ ಅವರನ್ನು ಉನ್ನತ ಶಿಕ್ಷಣ ಸಚಿವರ ಕಚೇರಿಗೆ, ನಿವೃತ್ತ ಬೆರಳಚ್ಚುದಾರರಾಗಿದ್ದ ಬಿ.ಎಸ್.ಶಿವಮೂರ್ತಿ ಅವರನ್ನು ನವದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ ಅವರ ಆಪ್ತ ಶಾಖೆಗೆ, ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಜಿ.ಬಿ.ಉಮಾನಾಥ್ ಅವರನ್ನು ಶಾಸಕ ಹಾಲಾಡಿ ಶ್ರೀನಿವಾಸ್‍ಶೆಟ್ಟಿ ಅವರ ಆಪ್ತ ಸಹಾಯಕರನ್ನಾಗಿ ನೇಮಿಸಲಾಗಿದೆ.

ಇಂದಿನ ಸಂಪುಟ ಸಭೆಯಲ್ಲಿ ಬಹುತೇಕ ನಿವೃತ್ತರ ನೇಮಕ, ಉಪಲೋಕಾಯುಕ್ತರ ಶಿಫಾರಸ್ಸಿಗೆ ವಿರುದ್ಧವಾಗಿ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವ ವಿಷಯ ಕುರಿತಂತೆ ಹೆಚ್ಚು ಚರ್ಚೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ