ಚುನಾವಣಾ ಫಲಿತಾಂಶದಲ್ಲಿ ಮೈತ್ರಿ ಸರ್ಕಾರಕ್ಕೆ ಹಿನ್ನಡೆ?-ಅದರ ಲಾಭ ಪಡೆಯಲು ಬಿಜೆಪಿ ಕಾರ್ಯತಂತ್ರ

ಬೆಂಗಳೂರು, ಮೇ 9-ಇದೇ 23ರಂದು ಪ್ರಕಟಗೊಳ್ಳಲಿರುವ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಹಿನ್ನಡೆಯಾದರೆ ಇದರ ಲಾಭ ಪಡೆಯಲು ಈಗಾಗಲೇ ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿದೆ.

ನಮ್ಮ ನಿರೀಕ್ಷೆಯಂತೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 18 ಕ್ಷೇತ್ರಗಳನ್ನು ಗೆದ್ದು, ಮಂಡ್ಯ, ತುಮಕೂರು, ಮೈಸೂರು-ಕೊಡಗು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಕಲಬುರಗಿಯಲ್ಲಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪರಾಭವಗೊಂಡರೆ ಖಂಡಿತವಾಗಿಯೂ ನಾವು ಸರ್ಕಾರ ರಚನೆ ಮಾಡುವ ಪ್ರಯತ್ನವನ್ನು ಮುಂದುವರೆಸಲಿದ್ದೇವೆ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.

ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸೋತರೆ 100ಕ್ಕೆ ನೂರರಷ್ಟು ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಕೆಲವು ಶಾಸಕರು ಸರ್ಕಾರದ ವಿರುದ್ಧ ಸಮರ ಸಾರಲು ಈಗಲೇ ಸಜ್ಜಾಗಿದ್ದಾರೆ. ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಪ್ರಮುಖರೊಬ್ಬರು ಹೇಳಿದ್ದಾರೆ.

ಮಂಡ್ಯದಲ್ಲಿ ನಿಖಿಲ್‍ಕುಮಾರಸ್ವಾಮಿ, ಮೈಸೂರು-ಕೊಡಗಿನಲ್ಲಿ ಸಿ.ಎಚ್. ವಿಜಯಶಂಕರ್ ಸೋತರೆ 23ರ ಮಧ್ಯಾಹ್ನದ ನಂತರವೇ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಈಗಿನ ಪ್ರಯತ್ನದಿಂದ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲು ನಾವು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಸರ್ಕಾರ ರಚಿಸುವಷ್ಟು ಬಿಜೆಪಿ ಮತ್ತು ಬೆಂಬಲಿತ ಪಕ್ಷಗಳು ಸ್ಥಾನಗಳನ್ನು ಪಡೆದುಕೊಂಡರೆ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಸಂಖ್ಯಾಬಲದ ಕೊರತೆಯಾದರೆ ಯಾರ ಬೆಂಬಲ ಪಡೆಯಬೇಕು ಎಂಬುದರ ಬಗ್ಗೆ ಈಗಾಗಲೇ ಚಿಂತನ-ಮಂಥನ ಆರಂಭವಾಗಿದೆ ಎಂದಿದ್ದಾರೆ.

ಈ ಬಾರಿ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳಲದೆ ಪ್ರತಿಪಕ್ಷಗಳ ತಂತ್ರಕ್ಕೆ ನಾವು ಕೂಡ ಪ್ರತಿತಂತ್ರ ರೂಪಿಸುತ್ತೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಈಗಾಗಲೇ ಅನೇಕ ಪ್ರಾದೇಶಿಕ ನಾಯಕರ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನ ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕವೇ ಟಾರ್ಗೆಟ್:
ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ತಕ್ಷಣವೇ ನಾವು ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಲು ನಮ್ಮದೇ ಆದ ರಣತಂತ್ರವನ್ನು ಹೆಣೆದಿದ್ದೇವೆ. ಒಂದು ವರ್ಷದ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ನಮ್ಮ ಪ್ರಯತ್ನಗಳು ವಿಫಲವಾಗಿರಬಹುದು. ಅದಕ್ಕೆ ಸ್ಥಳೀಯ ನಾಯಕರ ಕೆಲವು ಆತುರದ ನಿರ್ಧಾರಗಳು, ಸರಿಯಾದ ಕಾರ್ಯತಂತ್ರ ರೂಪಿಸದೆ ಇರುವುದು ಸೇರಿದಂತೆ ಬೇರೆ ಬೇರೆ ಕಾರಣಗಳು ಇರಬಹುದು.

ಈ ಬಾರಿ ನಮ್ಮ ಪ್ರಯತ್ನದಲ್ಲಿ ವಿಫಲವಾಗದಂತೆ ಅತ್ಯಂತ ಜಾಗ್ರತೆಯನ್ನು ವಹಿಸಿದ್ದೇವೆ. ಫಲಿತಾಂಶ ಪ್ರಕಟಗೊಂಡ ಮರುಕ್ಷಣವೇ ಸರ್ಕಾರದಲ್ಲಿ ಭಿನ್ನಮತ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಲಿದೆ.ಈಗಾಗಲೇ ಕುಮಾರಸ್ವಾಮಿ ನಾಯಕತ್ವವನ್ನು ಒಪ್ಪಿಕೊಳ್ಳಲು ಅನೇಕ ಶಾಸಕರು ಹಿಂದೇಟು ಹಾಕಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಎದ್ದಿದೆ.ಜೆಡಿಎಸ್ ಯಾವುದೇ ಕಾರಣಕ್ಕೂ ಅವರನ್ನು ಮುಖ್ಯಮಂತ್ರಿಯಾಗಲು ಒಪ್ಪುವುದಿಲ್ಲ. ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಕೂಡ ಸರ್ಕಾರ ಮುಂದುವರೆಯಬೇಕೆಂದು ಇಚ್ಛಿಸಿದ್ದಾರೆ.

ಆದರೆ ಸಿದ್ದರಾಮಯ್ಯನವರು ಹೊಸ ಜನಾದೇಶ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.ಹೀಗೆ ದೋಸ್ತಿಗಳಲ್ಲೇ ವೈಮನಸ್ಸು ಮೂಡಿದರೆ ಒಂದಿಷ್ಟು ಶಾಸಕರು ಕಾಂಗ್ರೆಸ್‍ನಿಂದ ಹೊರಬರಬಹುದು.ಈ ವೇಳೆ ನಾವು ಪರಿಸ್ಥಿತಿಯ ಲಾಭ ಪಡೆದುಕೊಂಡು ಸರ್ಕಾರ ರಚಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ