![mamata-modi](http://kannada.vartamitra.com/wp-content/uploads/2019/05/mamata-modi-677x381.jpg)
ಪುರುಲಿಯಾ(ಪಶ್ಚಿಮ ಬಂಗಾಳ), ಮೇ 9- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನಗೆ ಕಪಾಳ ಮೋಕ್ಷ ಮಾಡಿದರೆ ಅದನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಚುನಾವಣಾ ರ್ಯಾಲಿಯೊಂದರಲ್ಲಿ ಮಮತ ಬ್ಯಾನರ್ಜಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೋದಿಗೆ ಕಪಾಳಮೋಕ್ಷ ಮಾಡಬೇಕೆಂದು ಹೇಳಿದ್ದರು.
ಇಂದು ಪಶ್ಚಿಮಬಂಗಳಾದ ಪುರುಲಿಯಾದಲ್ಲಿ ಪಕ್ಷದ ಪರ ಬಹಿರಂಗ ಪ್ರಚಾರ ನಡೆಸಿದ ವೇಳೆ ಮಮತ ಬ್ಯಾನರ್ಜಿಯ ಪ್ರತಿಯೊಂದು ಟೀಕೆಗೆ ಬಡ್ಡಿ ಚುಕ್ತ ಮಾಡಿದರು.
ದೀದಿ ಎನ್ನುತ್ತಲೇ ಭಾಷಣ ಆರಂಭಿಸಿದ ಅವರು, ಪ್ರಜಾಪ್ರಭುತ್ವಕ್ಕಾಗಿ ದೀದಿ ಅವರು ನನಗೆ ಕಪಾಳ ಮೋಕ್ಷ ಮಾಡುತ್ತಾರಂತೆ. ಇದರಿಂದ ನನಗೆ ಯಾವ ಬೇಸರವೂ ಇಲ್ಲ. ಹಾಗೊಂದು ವೇಳೆ ಅವರು ಕಪಾಳಮೋಕ್ಷ ಮಾಡಿದರೆ ಅದನ್ನು ಆಶೀರ್ವಾದ ಎಂದುಕೊಳ್ಳುವೆ.
ದೀದಿ ವೋ ದೀದಿ ನಾನು ನಿಮ್ಮನ್ನು ದೀದಿ ಎನ್ನುವೆ. ನಿಮ್ಮ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನಿಮ್ಮ ಹೇಳಿಕೆಯನ್ನು ಸ್ವೀಕರಿಸುತ್ತೇನೆ. ಆದರೆ ನನ್ನದೊಂದು ಬೇಡಿಕೆ ಇದೆ. ನೀವು ಕಪಾಳಮೋಕ್ಷ ಮಾಡುವ ಮೊದಲು ಶಾರದಾ ಚಿಟ್ ಫಂಡ್ನಲ್ಲಿ ಬಡವರ ಹಣ ತಿಂದುತೇಗಿರುವ ನಿಮ್ಮ ಸಹೋದ್ಯೋಗಿಗಳಿಗೆ ಕಪಾಳಮೋಕ್ಷ ಮಾಡುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದರು.
ಶಾರದಾ ಚಿಟ್ ಫಂಡ್ ವಂಚನೆಯಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಆಗಿದ್ದಾರೆ. ಮೊದಲು ಅವರಿಗೆ ಕಪಾಳ ಮೋಕ್ಷ ಮಾಡಿ ನಂತರ ನನಗೆ ಕಪಾಳಕ್ಕೆ ಹೊಡೆಯುವೀರಂತೆ. ಟೋಲುಬಾಜೆ ಮಾಡಿದವರನ್ನು ನೀವು ರಕ್ಷಿಸಿಕೊಳ್ಳಲು ಮುಂದಾಗಿರುವುದು ನಿಮ್ಮ ದ್ವಂದ್ವ ನಿಲುವಿಗೆ ಸಾಕ್ಷಿ ಎಂದು ಮೋದಿ ದೀದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಇದೇ 12ರಂದು 6ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಕೋಟೆಯನ್ನು ಕೆಡವಲು ಬಿಜೆಪಿ ತನ್ನೆಲ್ಲ ತಂತ್ರವನ್ನು ಬಳಿಸಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು 23ರ ಫಲಿತಾಂಶದಲ್ಲಿ ಗೊತ್ತಾಗುತ್ತದೆ.