ಎಲ್ಲ ಸಮುದಾಯದವರನ್ನು ಪ್ರತಿನಿಧಿಸುವವರು ಮುಖ್ಯಮಂತ್ರಿಯಾಗಬೇಕು

ಮಂಡ್ಯ,ಮೇ 9- ನಮಗೆ ಎಲ್ಲ ಸಮುದಾಯವನ್ನು ಪ್ರತಿನಿಧಿಸುವವರು ಮುಖ್ಯಮಂತ್ರಿಯಾಗಬೇಕು ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಬದಲಾವಣೆಯಾಗಬೇಕೆಂಬ ಕೂಗಿಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಮುದಾಯಕ್ಕೆ ಮಾತ್ರ ಮುಖ್ಯಮಂತ್ರಿಯಾದರೆ ಸಾಲದು. ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಮುನ್ನಡೆಸುವಂತಹ ನಾಯಕತ್ವ ಈತ ತುರ್ತಾಗಿ ಬೇಕಾಗಿದೆ ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

38 ಸ್ಥಾನವನ್ನು ಪಡೆದವರು ಮುಖ್ಯಮಂತ್ರಿಯಾಗಿ 80 ಸ್ಥಾನ ಪಡೆದವರಿಗೆ ನೀವು ಹೀಗೆ ನಡೆದುಕೊಳ್ಳಬೇಕೆಂದು ಸೂಚಿಸುವುದು ಎಷ್ಟರಮಟ್ಟಿಗೆ ಸರಿ.

ಇನ್ನೊಬ್ಬರ ವಿರುದ್ಧ ಮಾತನಾಡುವವರು ಮೊದಲು ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಏನಾಗಬೇಕಿದೆಯೋ ಅದು ಆಗಿಯೇ ತೀರುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಂಡ್ಯದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲೂ ಆಗಿಲ್ಲ. ಕೇವಲ ರಾಷ್ಟ್ರೀಯ ನಾಯಕರನ್ನು ತೃಪ್ತಿಪಡಿಸಲು ಕೈ ಜೋಡಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವವರು ಉನ್ನತವಾಗಿಯೇ ನಡೆದುಕೊಳ್ಳದಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯದ ಅಪೆಕ್ಸ್ ಬ್ಯಾಂಕ್ ಚುನಾವಣೆಯನ್ನು ಯಾವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಜಿಲ್ಲೆಯ ಜನತೆ ಚುನಾವಣೆ ನಡೆಯುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕೆಲವು ಕಾಣದ ಕೈಗಳು ತಡೆಹಿಡಿದಿವೆ.

ಚುನಾವಣೆಯನ್ನು ನಿಲ್ಲಿಸಿದ ತಕ್ಷಣ ಮಂಡ್ಯದ ಜನತೆಗೇನು ಅನ್ಯಾಯವಾಗುವುದಿಲ್ಲ. ಇಡೀ ರಾಜ್ಯದಲ್ಲಿ ನಮ್ಮ ಅಪೆಕ್ಸ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸರ್ಕಾರವೇ ದುರುದ್ದೇಶಪೂರ್ವಕವಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಎಷ್ಟು ದಿನ ಇದು ಇರುತ್ತದೆ ಎಂದು ಪ್ರಶ್ನಿಸಿದರು.

ಅಪೆಕ್ಸ್ ಬ್ಯಾಂಕ್‍ನಲ್ಲಿ ಅವ್ಯವಹಾರ ನಡೆದಿದೆ ಎಂದು ಸರ್ಕಾರ ತನಿಖೆ ಮಾಡಲು ಮುಂದಾಗಿದೆ ಎಂಬ ವದಂತಿ ಹಬ್ಬಿದೆ. ಇವರು ಯಾರಿಂದ ತನಿಖೆ ಮಾಡಿಸುತ್ತಿದ್ದಾರೋ ಗೊತ್ತಿಲ್ಲ. ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್‍ನಲ್ಲಿ ಅವ್ಯವಹಾರ ನಡೆಸಿ ಜೈಲಿಗೆ ಹೋದವರು ಇಂದು ಅದೇ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರು. ಮೊದಲು ಇದನ್ನು ಸರಿಪಡಿಸಲಿ ಎಂದು ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ