38 ಸ್ಥಾನ ಗೆದ್ದವರು ನಮಗೆ ನೀತಿ ಪಾಠ ಹೇಳುವುದನ್ನು ನಿಲ್ಲಿಸಬೇಕು-ಮಾಜಿ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು,ಮೇ9- ಮಳೆ ನಿಂತರೂ ಮರದ ಹನಿ ನಿಲ್ಲಿಲ್ಲ ಎಂಬಂತೆ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಪರಿಹರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯತ್ನಿಸುತ್ತಿರುವಾಗಲೇ, ಮಿತ್ರ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪರ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಖುದ್ದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಹಳುತ್ತಿದ್ದರಾದರೂ ಒಳಗೊಳಗೆ ದಳಪತಿಗಳಿಗೆ ಇರಿಸುಮುರಿಸು ಉಂಟಾಗುವ ಬೆಳೆವಣಿಗೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಕೂಗಿಗೆ ಒಂದು ಕಾಲದ ಕುಮಾರಸ್ವಾಮಿ ಅವರ ಎಡಗೈ-ಬಲಗೈನಂತಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ದ್ವನಿಗೂಡಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಅಲ್ಲದೆ ಒಂದು ಹೆಜ್ಜೆ ಮುಂದು ಹೋಗಿರುವ ಅವರು ಕುಮಾರಸ್ವಾಮಿ ಅವರ ನಡವಳಿಕೆ ಮೇಲೆಯೇ ಅವರ ಕುರ್ಚಿ ಭದ್ರವಾಗಿರುತ್ತದೆ. 38 ಸ್ಥಾನ ಗೆದ್ದವರು 80 ಸ್ಥಾನ ಗೆದ್ದವರಿಗೆ ನೀತಿ ಪಾಠ ಹೇಳುವುದನ್ನು ನಿಲ್ಲಿಸಬೇಕೆಂದು ಜೆಡಿಎಸ್‍ಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಯಾರು ಏನೇ ಹೇಳಿದರೂ ಸದ್ಯದ ಮಟ್ಟಿಗೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ಆದರೆ ಹೈಕಮಾಂಡ್ ಅವರನ್ನು ಐದು ವರ್ಷಕ್ಕೆ ಮುಖ್ಯಮಂತ್ರಿ ಮಾಡಿದೆ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಮತ್ತೊಂದೆಡೆ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೆಡಿಎಸ್‍ನ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿರುವುದು ಮತ್ತೊಂದು ವಿಶೇಷವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ