ಬೆಂಗಳೂರು, ಮೇ 9- ಬಿಬಿಎಂಪಿ ಸದಸ್ಯರಿಬ್ಬರ ಅಕಾಲಿಕ ನಿಧನದಿಂದ ತೆರವಾಗಿರುವ ಎರಡು ವಾರ್ಡ್ಗಳಿಗೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಗೆ ಇಂದಿನಿಂದಲೇ ಅಧಿಸೂಚನೆ ಜಾರಿಯಲ್ಲಿದ್ದು, ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಉಪಮೇಯರ್ ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಕಾವೇರಿಪುರಂ ವಾರ್ಡ್ (ಬಿಸಿಎಂ ಮಹಿಳೆ) ಹಾಗೂ ಏಳುಮಲೈ ನಿಧನದಿಂದ ತೆರವಾಗಿರುವ ಸಗಾಯ್ಪುರಂ ವಾರ್ಡ್ಗೆ ( ಸಾಮಾನ್ಯ) 29ರಂದು ಚುನಾವಣೆ ನಡೆಯುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿವರ ನೀಡಿದರು.
ಮೇ 17ಕ್ಕೆ ನಾಮಪತ್ರ ಪರಿಶೀಲನೆ, ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ. 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೇ 31ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಸಗಾಯಿಪುರ ವಾರ್ಡ್ನ ಮತ ಎಣಿಕೆ ಪ್ರೇಸರ್ಟೌನ್ನಲ್ಲಿರುವ ಬಿಬಿಎಂಪಿ ಬಾಲಕಿಯರ ಪದವಿಪೂರ್ವ ಕಾಲೇಜು, ಕಾವೇರಿಪುರ ವಾರ್ಡ್ನ ಮತ ಎಣಿಕೆ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಸರ್ವೋದಯ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಅನ್ವಯವೇ ಈ ಎರಡೂ ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ಒಂದು ವಾರಕ್ಕೆ ಮೊದಲು ಮತದಾರರ ಮನೆಗಳಿಗೆ ವೋಟರ್ ಸ್ಲಿಪ್ ಕಳುಹಿಸುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಿರುವುದರಿಂದ ಈ ಉಪಚುನಾವಣೆಯಲ್ಲಿ ಎಡಗೈನ ಉಂಗುರದ ಬೆರಳಿಗೆ ಶಾಯಿ ಹಾಕಲಾಗುವುದು.
ಸಗಾಯಿಪುರ ವಾರ್ಡ್ನಲ್ಲಿ 31, ಕಾವೇರಿಪುರ ವಾರ್ಡ್ನಲ್ಲಿ 43 ಮತಗಟ್ಟೆಗಳನ್ನು ಸ್ಥಾಪಿಸಿದ್ದೇವೆ. ಈ ಚುನಾವಣೆಯಲ್ಲೂ ಇವಿಎಂ ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಗಾಯಿಪುರ ವಾರ್ಡ್ಗೆ ಎಂ.ಪಿ.ಕೃಷ್ಣಕುಮಾರ್ ಅವರನ್ನು ಹಾಗೂ ಕಾವೇರಿಪುರಂ ವಾರ್ಡ್ಗೆ ರಾಜು ಅವರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ.
ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷ ಅಧಿಕಾರಿ, ಮೂವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 74 ಮತಗಟ್ಟೆಗಳಿಗೆ ಶೇ.20ರಷ್ಟು ಹೆಚ್ಚುವರಿ ಸಿಬ್ಬಂದಿ ಸೇರಿ ಒಟ್ಟು 356 ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಮೈಕ್ರೋ ಅಬ್ಸರ್ವರ್ ಮತ್ತು ಚುನಾವಣಾ ಸಿಬ್ಬಂದಿಗಳಿಗೆ ಎರಡು ಹಂತದಲ್ಲಿ ತರಬೇತಿ ಕೊಡಲಾಗುತ್ತದೆ.ಸಗಾಯ್ಪುರಂ ವಾರ್ಡ್ನಲ್ಲಿ 15,692 ಪುರುಷ ಮತದಾರರು, 16,231 ಮಹಿಳಾ ಮತದಾರರು ಹಾಗೂ ಐದು ಮಂದಿ ಇತರರು ಸೇರಿ 31,928 ಮತದಾರರಿದ್ದಾರೆ. ಅದೇ ರೀತಿ ಕಾವೇರಿಪುರ ವಾರ್ಡ್ನಲ್ಲಿ 26,522 ಪುರುಷ, 22,706 ಮಹಿಳಾ ಮತದಾರರು ಹಾಗೂ ಇತರೆ 10 ಮಂದಿ ಸೇರಿ ಒಟ್ಟು 49,238 ಮತದಾರರಿದ್ದಾರೆ.
ಎರಡೂ ವಾರ್ಡ್ಗಳಿಗೆ ಇಂದಿನಿಂದ ಅಧಿಸೂಚನೆ ಜಾರಿಗೆ ಬಂದಿದ್ದು, ನೀತಿ ಸಂಹಿತೆ ಇವರೆಡು ವಾರ್ಡ್ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 5 ಲಕ್ಷ ರೂ.ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.
ಮಾದರಿ ಮತ ಎಣಿಕೆ ಕೇಂದ್ರ: ಚುನಾವಣಾ ಆಯೋಗದ ನಿರ್ದೇಶನದಂತೆ ಮಲ್ಲೇಶ್ವರಂನಲ್ಲಿರುವ ಐಟಿಪಿ ಸೆಂಟರ್ನಲ್ಲಿ ಮಾದರಿ ಮತ ಎಣಿಕಾ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಈ ಮಾದರಿ ಕೇಂದ್ರದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಮತ ಎಣಿಕೆ ಕುರಿತು ತರಬೇತಿ ನೀಡಲಾಗುವುದು ಎಂದರು.
ಮೇ 12 ರಿಂದ 17ರ ವರೆಗೆ ಚುನಾವಣೆ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಪ್ರತಿದಿನ ತರಬೇತಿ ನೀಡಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.