ಕುಣಿಗಲ್, ಮೇ 9- ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ.
ಕೌಶಿಕ್ (26) ಬಂಧಿತ ಆರೋಪಿ.
ಹುಲಿಯೂರುದುರ್ಗ ಹೋಬಳಿ ಮಾದಗೋನಹಳ್ಳಿ ಗ್ರಾಮದವನಾದ ಈ ಆರೋಪಿ ಪಕ್ಕದ ಸೀಗೆಪಾಳ್ಯ ಗ್ರಾಮದ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ.
ಈಕೆ ಹುಲಿಯೂರುದುರ್ಗದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು.
ಆರೋಪಿ ಕೌಶಿಕ್ ಈಕೆಯನ್ನು ಕಳೆದ ಒಂದು ತಿಂಗಳ ಹಿಂದೆ ಅಪಹರಿಸಿ ಬೆಂಗಳೂರಿನಲ್ಲಿ ತನ್ನ ಸ್ನೇಹಿತನ ರೂಮಿನಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಿದ್ದನೆಂದು ಆರೋಪಿಸಲಾಗಿದೆ.
ಶಾಸಕ ರಂಗನಾಥ್ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರು ಆರೋಪಿಯ ಗ್ರಾಮದವರಾಗಿದ್ದು, ಆರೋಪಿಯನ್ನು ಸಂಪರ್ಕಿಸಿ ರಾಜಿ ಸಂಧಾನ ಮಾಡಿಸುವುದಾಗಿ ಕರೆಸಿದರು.
ಆರೋಪಿ ಕೌಶಿಕ್ ವಿದ್ಯಾರ್ಥಿನಿಯೊಂದಿಗೆ ಠಾಣೆಗೆ ಬಂದ. ತಕ್ಷಣ ಯಾವುದೇ ರಾಜಿ ಸಂಧಾನ ನಡೆಸದೆ ಆತನನ್ನು ಬಂಧಿಸಲಾಗಿದೆ.
ಹುಲಿಯೂರು ದುರ್ಗ ಪೊಲೀಸರು ನ್ಯಾಯಾಲಯದ ಮುಂದೆ ಇಬ್ಬರನ್ನು ಹಾಜರುಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ನ್ಯಾಯಾಧೀಶರ ಮುಂದೆ ಕೌಶಿಕ್ ತನ್ನನ್ನು ಅಪಹರಿಸಿ ಅತ್ಯಾಚಾರವೆಸಗಿದನೆಂದು ಹೇಳಿಕೆ ನೀಡಿದ್ದಾಳೆ.
ಈಕೆಯ ಹೇಳಿಕೆ ಆಧರಿಸಿ ನ್ಯಾಯಾಧೀಶರು ಕೌಶಿಕ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.