![fire_safety](http://kannada.vartamitra.com/wp-content/uploads/2019/05/fire_safety-667x381.jpg)
ಥಾಣೆ, ಮೇ 9- ಅಗ್ನಿ ದುರಂತ ತಡೆಯುವ ಯಾವುದೇ ಜವಾಬ್ದಾರಿ ಇಲ್ಲದ ಮತ್ತು ಅಗ್ನಿ ಆರಿಸುವ ಉತ್ಪನ್ನಗಳನ್ನು ಇಡದ 15 ಆಸ್ಪತ್ರೆಗಳನ್ನು ಥಾಣೆ ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ದುರಂತದಲ್ಲಿ ಹಲವರು ಸಾವು ಕಂಡಿದ್ದು, ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಎಲ್ಲಾ ದೊಡ್ಡ ಕಟ್ಟಡಗಳು, ಸಾರ್ವಜನಿಕ ಕಚೇರಿ, ಆಸ್ಪತ್ರೆಗಳು ಕಡ್ಡಾಯವಾಗಿ ಅಗ್ನಿ ಸುರಕ್ಷತಾ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕೆಂದು ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚಿಸಿತ್ತು.
ಇದರಿಂದಾಗಿ ಎಲ್ಲಾ ಮಹಾನಗರ ಪಾಲಿಕೆ ಎಚ್ಚೆತ್ತು ಎನ್ಒಸಿ ಪಡೆಯಲು ಸೂಚಿಸಿತ್ತು. ಇದಲ್ಲದೆ ನ್ಯಾಯಾಲಯ ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿ ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿತ್ತು.
ಈ ಹಿಂದೆ ಅಗ್ನಿ ರಕ್ಷಣಾ ಇಲಾಖೆ ಶೇ.50ರಷ್ಟು ಆಸ್ಪತ್ರೆಗಳು ನಿಯಮ ಪಾಲಿಸುತ್ತಿಲ್ಲ ಎಂದು ವರದಿ ನೀಡಿದ್ದರು. ಹೈಕೋರ್ಟ್ ನಾಲ್ವರು ಸದಸ್ಯರ ತಂಡ ರಚಿಸಿ ಪರಿಶೀಲಿಸಲು ಸೂಚಿಸಿತ್ತು.
ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿದ್ದೇವೆ. ನಿರ್ದಾಕ್ಷಿಣ್ಯವಾಗಿ ನಿಯಮ ಪಾಲಿಸದ ಆಸ್ಪತ್ರೆಗಳಿಗೆ ಬೀಗ ಜಡಿಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.