ನೆನ್ನೆ ಸುರಿದ ಧಾರಾಕಾರ ಮಳೆಗೆ ಧರೆಗುರುಳಿದ ಮರಗಳು

ಬೆಂಗಳೂರು,ಮೇ 8- ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ 63 ಮರಗಳು,75ಕ್ಕೂ ಹೆಚ್ಚು ಕೊಂಬೆಗಳು ಧರೆಗುರುಳಿ ಬಿದ್ದಿವೆ.ಮರ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯತ್ರಿನಗರ 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆಯಲ್ಲಿ ಪೂಜಾ(28) ಎಂಬುವರು ಬೈಕ್ ನಿಲ್ಲಿಸುತ್ತಿದ್ದಾಗ ಪಕ್ಕದಲ್ಲಿದ್ದ ಮರ ಬುಡಸಮೇತ ಅವರ ಮೇಲೆ ಉರುಳಿಬಿತ್ತು.

ತಕ್ಷಣ ಅಕ್ಕಪಕ್ಕದವರು ಪೂಜಾ ಅವರನ್ನು ರಕ್ಷಿಸಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬನಶಂಕರಿ 8ನೇ ಹಂತ, ಅಶೋಕನಗರ, ಗೊರಗುಂಟೆಪಾಳ್ಯ, ಆರ್‍ಎಂಸಿಯಾರ್ಡ್, ಬಗಲಗುಂಟೆ, ಚೊಕ್ಕಸಂದ್ರ, ಎಂಇಐ ಬಡಾವಣೆ, ಪೀಣ್ಯಾ, ಸಂಜಯನಗರ, ಭದ್ರಪ್ಪ ಲೇಔಟ್, ಹೆಗ್ಗನಹಳ್ಳಿ, ಗಾಯತ್ರಿನಗರ, ಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ನವರಂಗ್, ಸೌತ್‍ಎಂಡ್ ಸರ್ಕಲ್, ಪದ್ಮನಾಭನಗರ, ಸಂಜಯನಗರ, ರಾಜಗೋಪಾಲನಗರ, ಮೈಕೋಲೇಔಟ್ ಮತ್ತಿತರ 63ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ.

ಆದರೆ ನಿನ್ನೆ ಬಿದ್ದ ಮಳೆಯಿಂದ ಯಾವುದೇ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾದ ಉದಾಹರಣೆಗಳು ಕಂಡುಬಂದಿಲ್ಲ.

ಬೊಮ್ಮನಹಳ್ಳಿ ವಲಯದ ಕೆಲ ಪ್ರದೇಶಗಳಲ್ಲಿ ನೀರು ನಿಂತು ಅಡಚಣೆಯಾಗುವುದನ್ನು ತಪ್ಪಿಸುವಲ್ಲಿ ಅಭಿಯಂತರರು ಯಶಸ್ವಿಯಾಗಿದ್ದಾರೆ.

ಆದರೆ ಬಿಟಿಎಂ ಬಡಾವಣೆಯಲ್ಲಿರುವ ಅಪಾರ್ಟ್‍ಮೆಂಟ್‍ಗೆ ಡ್ರೈನೇಜ್ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

ಕಳೆದ ಮೂರು ವರ್ಷಗಳಿಂದಲೂ ಅಪಾರ್ಟ್‍ಮೆಂಟ್‍ಗೆ ಡ್ರೈನೇಜ್ ನೀರು ನುಗ್ಗುತ್ತಿದ್ದರೂ ಬಿಬಿಎಂಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ನಿನ್ನೆ ಸಂಜೆ ಬಿದ್ದ ಮಳೆಯಿಂದ ಮರಗಳು ವಿದ್ಯುತ್ ಕಂಬಗಳ ಮೇಲೇ ಬಿದ್ದ ಪರಿಣಾಮ ಬಸವೇಶ್ವರನಗರ, ರಾಜಾಜಿನಗರ ಮತ್ತಿತರೆಡೆ ರಾತ್ರಿಯಿಡೀ ಕರೆಂಟ್ ಇಲ್ಲದೆ ಜನರು ಪರದಾಡಬೇಕಾಯಿತು.

ಕಾರ್ಯಾಚರಣೆಗಿಳಿದ ಮೇಯರ್:
ನಿನ್ನೆ ಮಳೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ದಕ್ಷಿಣ ವಲಯ ನಿಯಂತ್ರಣ ಕೊಠಡಿಗೆ ಖುದ್ದು ಹಾಜರಾದ ಮೇಯರ್ ಗಂಗಾಂಬಿಕೆಯವರು ಸಮಸ್ಯೆಗಳ ಮಾಹಿತಿ ಪಡೆದರು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಮೇಯರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ತೊಂದರೆ ನಿವಾರಿಸುವಂತೆ ಮೇಯರ್ ಗಂಗಾಂಬಿಕೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೇಯರ್ ಸೂಚನೆ ಮೇರೆಗೆ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ ವರ್ಗದವರು ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಇಂದು ಬೆಳಗ್ಗೆ ಉಪಮೇಯರ್ ಭದ್ರೇಗೌಡ, ಆಡಳಿತಪಕ್ಷದ ನಾಯಕ ಅಬ್ದುಲ್ ವಾಜೀದ್ ಮತ್ತಿತರರೊಂದಿಗೆ ಮರ ಬಿದ್ದು ತೀವ್ರವಾಗಿ ಗಾಯಗೊಂಡು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂಜ ಅವರನ್ನು ಭೇಟಿಯಾದ ಮೇಯರ್ ಗಂಗಾಂಬಿಕೆ ಆರೋಗ್ಯ ವಿಚಾರಿಸಿದರು.

ಬುಡಸಮೇತ ಮರ ಉರುಳಿಬಿದ್ದ ಪರಿಣಾಮ ಪೂಜಾ ಅವರ ಸ್ಪೈನಲ್‍ಕಾರ್ಡ್‍ಗೆ ಪೆಟ್ಟು ಬಿದ್ದಿದ್ದು, ನಾಳೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ ಎಂದು ಮೇಯರ್ ತಿಳಿಸಿದರು.

ನಂತರ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್, ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಮತ್ತೆ ಮಳೆಯಾದರೆ ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ