
ಹುಬ್ಬಳ್ಳಿ, ಮೇ 8- ನಮ್ಮ ನಾಯಕರು ಸಿದ್ದರಾಮಯ್ಯನವರೇ. ಆದರೆ, ಈಗ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಯವರಿದ್ದಾರೆ. ನಾಯಕರೇ ಬೇರೆ, ಮುಖ್ಯಮಂತ್ರಿ ವಿಚಾರವೇ ಬೇರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿಂದು ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ ಅದರಲ್ಲಿ ಎರಡು ಮಾತಿಲ್ಲ. ಆದರೆ, ಸಿಎಂ ಆಗೋ ಬಗ್ಗೆ ಈಗ ಹೇಳೋಕ್ಕಾಗಲ್ಲ ಎಂದರು.
ಕುಂದಗೋಳ ಉಪಚುನಾವಣೆಗಾಗಿ ನಾವು ಪ್ರಚಾರ ಮತ್ತು ಸಿದ್ದತೆ ನಡೆಸುತ್ತಿದ್ದೇವೆ. ಬೂತ್ ಮಟ್ಟದ ಉಸ್ತುವಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರ ಸುಭದ್ರವಾಗಿದೆ, ಆದರು ಕೂಡಾ ಉಪಚುನಾವಣೆ ಗೆಲ್ಲೋದು ನಮ್ಮ ಕರ್ತವ್ಯ.ನಾವು ಚಿಂಚೋಳಿ, ಕುಂದಗೋಳ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ನಾನು ಮೇ 17 ರವರೆಗೂ ಕುಂದಗೋಳದಲ್ಲೆ ಇರುತ್ತೇನೆ ಎಂದರು.