ಐದು ವರ್ಷದಿಂದ ಈಬಗ್ಗೆ ಮಾತನಾಡದೆ ಅವರೇನು ಕತ್ತೆ ಕಾಯುತ್ತಿದ್ದರಾ… : ಸಚಿವ ಪ್ರಿಯಾಂಕ್ ಖರ್ಗೆ

ಕಲ್ಬುರ್ಗಿ, ಮೇ 8-ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು 50 ಸಾವಿರ ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಬಿಜೆಪಿ ನಾಯಕ ಉಮೇಶ್ ಜಾಧವ್ ಅವರು ಮಾಡಿರುವ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಐದು ವರ್ಷದಿಂದ ಈಬಗ್ಗೆ ಮಾತನಾಡದೆ ಅವರೇನು ಕತ್ತೆ ಕಾಯುತ್ತಿದ್ದರಾ…ಎಂದು ಕಿಡಿಕಾರಿದರು.

ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಜಾಧವ್ ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ಸ್ಪಷ್ಟವಾದ ಕಾರಣ ಇಲ್ಲ. ಹಾಗಾಗಿ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಮೇಶ್‍ಜಾಧವ್ ಮತ್ತು ರವಿಕುಮಾರ್ ಕೆಲಸಕ್ಕೆ ಬಾರದವರು ಎಂದು ಆರೋಪಿಸಿದರು.

ಕಾಂಗ್ರೆಸ್‍ನಲ್ಲೇ ಎರಡು ಬಾರಿ ಶಾಸಕರಾಗಿದ್ದ ಉಮೇಶ್ ಜಾಧವ್ ಖರ್ಗೆ ಅವರ ಅಕ್ರಮ ಆಸ್ತಿ ಬಗ್ಗೆ ಆಗೆಲ್ಲಾ ಏಕೆ ಮಾತನಾಡಲಿಲ್ಲ. ಬಿಜೆಪಿ ಸೇರಿದ ಬಳಿಕ ಅದು ಚುನಾವಣೆ ವೇಳೆ ಅಕ್ರಮ ಆಸ್ತಿಯ ಬಗ್ಗೆ ಜ್ಞಾನೋದಯವಾಯಿತೇ ಎಂದು ಲೇವಡಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ