ಬೆಂಗಳೂರು, ಮೇ 8-ಕಾಂಗ್ರೆಸ್ನ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಜೊತೆ ಕೈ ಜೋಡಿಸಲು ಅವರ ಆಪ್ತರು ಮತ್ತೊಮ್ಮೆ ಹಿಂದೇಟು ಹಾಕಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಸಲುವಾಗಿ ಗುಂಪಾಗಿಯೇ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದು ರಮೇಶ್ಜಾರಕಿ ಹೊಳಿ ಲೋಕಸಭೆ ಚುನಾವಣೆ ದಿನ ಬಹಿರಂಗ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬೆಂಗಳೂರಿಗೆ ಬಂದು ಅತೃಪ್ತ ಶಾಸಕರ ಸಭೆ ನಡೆಸುವ ಪ್ರಯತ್ನ ಮಾಡಿದರು.
ರಮೇಶ್ ಜಾರಕಿ ಹೊಳಿ ಬೆಂಬಲಿಗ ಎನ್ನಲಾದ ಶ್ರೀಮಂತ ಪಾಟೀಲ್, ಪ್ರತಾಪ್ಗೌಡ ಪಾಟೀಲ್ ಅವರು ರಮೇಶ್ ಜಾರಕಿ ಹೊಳಿ ಅವರನ್ನು ಭೇಟಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಇಬ್ಬರು ಶಾಸಕರು ಬೆಂಗಳೂರಿಗೆ ಆಗಮಿಸಿದ್ದರಾದರೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತೆರಳಿದರು. ಹೀಗಾಗಿ ಮೊದಲ ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ನಂತರ ಮೂರು ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದಿದ್ದ ರಮೇಶ್ ಜಾರಕಿ ಹೊಳಿ ಅವರು ಮರಳಿ ಯತ್ನವಾ ಮಾಡಿದರು.
ಈ ಬಾರಿ ಪ್ರತಾಪ್ಗೌಡ ಪಾಟೀಲ್, ಶ್ರೀಮಂತಪಾಟೀಲ್, ಭೀಮಾನಾಯ್ಕಾ, ನಾಗೇಂದ್ರ, ಜೆ.ಎನ್.ಗಣೇಶ್ ಅವರುಗಳ ಜೊತೆ ಸಭೆ ನಡೆಸುವ ಪ್ರಯತ್ನ ನಡೆಸಿದರು.ಆದರೆ ಇದೂ ಕೂಡ ಯಶಸ್ವಿಯಾಗಿಲ್ಲ. ಹೀಗಾಗಿ ರಮೇಶ್ ಜಾರಕಿ ಹೊಳಿ ಇಂದು ಬೆಳಗಾವಿಗೆ ವಾಪಸ್ಸಾಗಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಮುಂದಿನ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸದ ಹೊರತು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕರು ರಮೇಶ್ ಜಾರಕಿ ಹೊಳಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡು ಮೂರು ಸಭೆ ಕರೆದರೂ ಯಾರೊಬ್ಬರೂ ಹಾಜರಾಗದೆ ಕಾರ್ಯಾಚರಣೆ ವಿಫಲಗೊಳ್ಳುತ್ತಿದೆ.