ಸಿಎಂ ಕುರ್ಚಿ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತ-ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ, ಮೇ 8- ನಮ್ಮ ಶಾಸಕರು ಅಭಿಮಾನದಿಂದ ಅವರ ಅಭಿಪ್ರಾಯ ಹೇಳುತ್ತಾರೆ. ಆದರೆ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಸಿಎಂ ಕುರ್ಚಿ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಸಿದ್ದರಾಮಯ್ಯನವರು ಪುನಃ ಸಿಎಂ ಆಗುತ್ತಾರೆ ಎಂಬ ಹೇಳಿಕೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಶಾಸಕರು ಅಭಿಮಾನದಿಂದ ಹೇಳುತ್ತಾರೆ. ಅವರು ಹೇಳಿದ ಹಾಗೆ ಹೇಗಾಗುತ್ತದೆ. ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.

ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಷಯ ಮಾಧ್ಯಮಗಳ ಸೃಷ್ಠಿ ಎಂದ ಅವರು, ಇಂತಹ ಯಾವುದೇ ಆಲೋಚನೆ, ಬೆಳವಣಿಗೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅವರು ಮುಂದೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಈ ಹಿಂದೆ ಅಧಿಕಾರಕ್ಕೆ ಬರಲು ಬೇರೆಯೇ ಕಾರಣವಿತ್ತು. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಮೂರು ಜನ ಸಿಎಂ ಆಗಿದ್ದರು. ಭ್ರಷ್ಟಾಚಾರ ಮಾಡಿ ಆರು ಮಂದಿ ಮಂತ್ರಿಗಳು ಜೈಲಿಗೆ ಹೋಗಿದ್ದರು. ಅಂತಹವರಿಗೆ ಜನ ಏಕೆ ಮತ ಹಾಕುತ್ತಾರೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಕುಂದಗೋಳ, ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊರಟ್ಟಿಗೆ ಏಕೆ ಉಸಾಬರಿ?

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಸಿದುಕೊಂಡಿದ್ದು ತಪ್ಪು ಎನ್ನುವ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿಯವರು ಹಿರಿಯ ಜೆಡಿಎಸ್ ನಾಯಕರು. ನಮ್ಮ ಪಕ್ಷದ ಬಗ್ಗೆ ಮಾತನಾಡದೇ ಇರೋದು ಒಳ್ಳೆಯದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ