ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿಯ ಶ್ರೀಮಂತ ದಲಿತ-ಮಾಜಿ ಶಾಸಕ ಡಾ.ಉಮೇಶ್ ಜಾಧವ್

ಕಲಬುರಗಿ, ಮೇ 8-ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ 50 ಸಾವಿರ ಕೋಟಿಯ ಶ್ರೀಮಂತ ದಲಿತ. ಅವರ ವಿರುದ್ಧ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಈ ವಿಷಯವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದೆ ಎಂದು ಮಾಜಿ ಶಾಸಕ ಡಾ.ಉಮೇಶ್‍ಜಾಧವ್ ಆರೋಪಿಸಿದ್ದಾರೆ.

ಚಂದಾಪುರದಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಂಜಾರಾ ಸಮುದಾಯವನ್ನು ವಿಭಜಿಸುವ ಪಾಪದ ಕೆಲಸ ಅವರಿಂದಾಗುತ್ತಿದೆ. ಇದನ್ನು ಬಿಟ್ಟು ತಾಕತ್ತಿದ್ದರೆ ನೇರವಾಗಿ ನನ್ನ ವಿರುದ್ಧ ಉಪಚುನಾವಣೆ ಮಾಡಿ ಎಂದು ಸವಾಲು ಹಾಕಿದ್ದಾರೆ.

ಚಿಂಚೋಳಿ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿ ಎಂದು ನಾನು ಹಲವು ಬಾರಿ ಮನವಿ ಮಾಡಿದ್ದೆ. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ. ನನ್ನ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭ ಮಾಡಿದ್ದರೆ ಸಾಯುವವರೆಗೂ ನಾನು ಪಕ್ಷದ ಗುಲಾಮನಾಗಿರುತ್ತಿದ್ದೆ.ಆದರೆ ಅಭಿವೃದ್ಧಿಗೆ ಅವರು ಅವಕಾಶ ಕೊಡಲಿಲ್ಲ ಎಂದು ಹೇಳಿದರು.

ನಾನು ಎರಡನೇ ಬಾರಿ ಶಾಸಕನಾಗಿದ್ದಾಗ ಕ್ಷೇತ್ರಕ್ಕೆ ಯಾವೊಬ್ಬ ಮಂತ್ರಿಯೂ ಬರಲಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಮಂತ್ರಿಗಳು ಇತ್ತ ತಲೆ ಹಾಕುತ್ತಿರಲಿಲ್ಲ. ಚಿಂಚೋಳಿಯಲ್ಲಿ ನಕ್ಸಲರಿದ್ದಾರೆ ಎಂದು ಸುದ್ದಿ ಹಬ್ಬಿಸಿ ಅಧಿಕಾರಿಗಳೂ ಸಹ ಬರುತ್ತಿರಲಿಲ್ಲ. ಆಗ ಬರದಿದ್ದ ಕಾಂಗ್ರೆಸ್ಸಿಗರು ಈಗ ಸಾಲು ಸಾಲಾಗಿ ಬಂದು ಪ್ರಚಾರ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ಸಂಸ್ಕಾರವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವೈದ್ಯ ವೃತ್ತಿಗೆ ಅಪಮಾನವಾಗುವಂತೆ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಒಂದು ಕಳಂಕ ಇಲ್ಲದಂತೆ ಕೆಲಸ ಮಾಡಿದ್ದೇನೆ. ನಾನು ಹಣ ಪಡೆದು ಅಮಾನತ್ತಾಗಿದ್ದು ನಿಜವೇ ಆಗಿದ್ದರೆ, ಯಾವ ಸಂಸ್ಥೆಯಿಂದಾದರೂ ತನಿಖೆ ನಡೆಸಲಿ.ರಾಜಕೀಯ ಸೇರುವ ಸಲುವಾಗಿ ನಾನು ವೈದ್ಯ ವೃತ್ತಿಗೆ ರಾಜೀನಾಮೆ ನೀಡಿದಾಗ 200 ಜನ ನನ್ನ ಸಹೋದ್ಯೋಗಿಗಳು ಕಣ್ಣೀರಿಟ್ಟಿದ್ದರು. ಪರಮೇಶ್ವರ್ ಅವರಂತಹ ನಾಯಕರು ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಂಚಾವರಂನಲ್ಲಿ ಯಾವುದೇ ಮಕ್ಕಳ ಮಾರಾಟವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿಗರು ವಾದಿಸುತ್ತಿದ್ದಾರೆ. ಹೆಣ್ಣು ಮಗಳೊಬ್ಬಳು ಮಕ್ಕಳನ್ನು ಸಾಕಲು ಸಹಾಯ ಮಾಡಿ ಎಂದು ಸಚಿವ ಪ್ರಿಯಾಂಕ್‍ಖರ್ಗೆ ಬಳಿ ಹೋದಾಗ ಮಕ್ಕಳನ್ನು ಹೆರಲು ನಿನಗೆ ಯಾರು ಹೇಳಿದ್ದರು ಎಂದು ನಿಂದಿಸುವ ಮೂಲಕ ಸಹಾಯ ಕೇಳಿದ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮಾರಾಟವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಗಂಭೀರ ಆರೋಪ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ